ಉಳ್ಳಾಲ: ಮಂಗಳೂರು ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯ ಬಳಿ ಇಂದು ಗುಂಡಿನ ಶಬ್ದ ಕೇಳಿಸಿದೆ. ಕಳೆದ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ಆರೋಪಿಯೊಬ್ಬನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
15ಕ್ಕೂ ಅಧಿಕ ಪ್ರಕರಣಗಳ ಆರೋಪಿ ಮುಕ್ತಾರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಆರು ಪ್ರಕರಣಗಳಲ್ಲಿ ಕಳೆದ ಐದು ವರ್ಷದಿಂದ ಪೊಲೀಸರ ಕೈಗೆ ಸಿಗದೆ ಮುಕ್ತಾರ್ ತಪ್ಪಿಸಿಕೊಂಡಿದ್ದ. ಇತ್ತೀಚೆಗೆ ಪ್ರಕರಣವೊಂದರಲ್ಲಿ ಉಳ್ಳಾಲ ಪೊಲೀಸರು ಆತನನ್ನು ಬಂಧಿಸಿದ್ದರು. ಆ ಪ್ರಕರಣದ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಮುಕ್ತಾರ್ ಯತ್ನಿಸಿದ್ದಾನೆ.
ಕೊಣಾಜೆ ಪೊಲೀಸ್ ಠಾಣೆಯ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಅಕ್ಬರ್ ಮತ್ತು ವಾಸುದೇವ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಆಗುಂಬೆ ಘಾಟಿ : ರಸ್ತೆ ಬಿರುಕು, ಮತ್ತೆ ಕುಸಿಯುವ ಭೀತಿ
ನಗರದ ಖಾಸಗಿ ಆಸ್ಪತ್ರೆಯಲ್ಲಿ ಆರೋಪಿ ಮುಕ್ತಾರ್ ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.