ಕಲಬುರಗಿ/ಜೇವರ್ಗಿ: ಜೇವರ್ಗಿಯ ಹುಲ್ಲೂರು ಚೆಕ್ ಪೋಸ್ಟ್ ಬಳಿಯಲ್ಲಿ ನಡೆದ ಪೊಲೀಸ್ ಪೇದೆ ಮೇಲಿನ ದಾಳಿಯ ಸೂತ್ರದಾರ ಮರ ಸಾಗಿರುವ ಟ್ರ್ಯಾಕ್ಟರ್ ಮಾಲಿಕ ಹಾಗೂ ರೌಡಿ ಶೀಟರ್ ಸಾಯಿಬಣ್ಣ ಕರ್ಜಗಿಯನ್ನು ಬಂಧಿಸಲಾಗಿದೆ. ಆಲಮೇಲದಿಂದ ಕರೆ ತರುವ ಮಾರ್ಗ ಮಧ್ಯೆ ಪೊಲೀಸರ ಮೇಲೆ ಹಲ್ಲೆ ಮಾಡಿ ಓಡಿಹೋಗಲು ಯತ್ನಿಸಿದ್ದು, ಸಾಯಿಬಣ್ಣನ ಕಾಲಿಗೆ ಗುಂಡು ಹಾರಿಸಿಲಾಗಿದೆ. ಶನಿವಾರ ಮಧ್ಯಾಹ್ನ ಮಂದೇವಾಲ-ನೇದಲಗಿ ಮಧ್ಯೆ ಈ ಘಟನೆ ನಡೆದಿದೆ.
ಗುರುವಾರ ರಾತ್ರಿ ಪೇದೆ ಮಯೂರ್ ಮೇಲೆ ಟ್ಯಾಕ್ಟರ್ ಹತ್ತಿಸಿ ಬಲಿ ಪಡೆದಿದ್ದ ಸಾಯಿಬಣ್ಣ ಪರಾರಿಯಾಗಿದ್ದ. ಶನಿವಾರ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟೆ, ಜೇವರ್ಗಿ ಪಿಎಸ್‌ಐ ಸಂಗಮೇಶ ಅಂಗಡಿ ಹಾಗೂ ಎಎಸ್‌ಐ ಗುರುಬಸಪ್ಪ ಇತರೆ ಸಿಬ್ಬಂದಿ ಬಂಧಿಸಿದ್ದರು.
ಆದರೆ ವಾಹನದಲ್ಲಿ ಕರೆ ತರುವ ವೇಳೆಯಲ್ಲಿ ಮಾರ್ಗ ಮಧ್ಯೆ ನಿಸರ್ಗ ಕರೆಗೆ ಇಳಿದಿದ್ದ ಸಾಯಿಬಣ್ಣ ಚಾಕುವಿನಿಂದ ಏಕಾಏಕಿ ಪಿಎಸ್‌ಐ ಬಸವರಾಜ ಚಿತಕೋಟೆ ಮೇಲೆ ಹಲ್ಲೆ ಮಾಡಿದ್ದಾನೆ. ಕೈಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗುವ ವೇಳೆಯಲ್ಲಿ ವಾಹನದಲ್ಲೇ ಇದ್ದ ಇನ್ನೊಬ್ಬ ಪಿಎಸ್‌ಐ ಸಂಗಮೇಶ ಸರ್ವಿಸ್ ರಿವಲ್ವಾರ್ ನಿಂದ ಸಾಯಿಬಣ್ಣನ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ರೌಡಿ ಶೀಟರ್ ಸಾಯಿಬಣ್ಣ: ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಮತ್ತು ಗುರುವಾರ ರಾತ್ರಿ ಪೇದೆ ಮಯೂರ್ ಮೇಲೆ ಹಾಯಿಸಿದ ಟ್ರ್ಯಾಕ್ಟರ್ ಮಾಲಿಕನೂ ಆಗಿರುವ ಸಾಯಿಬಣ್ಣರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಶೀಟ್ ಓಪನ್ ಆಗಿತ್ತು. ಪೇದೆ ಬಲಿಯ ಬಳಿಕ ಜೇವರ್ಗಿ ಪಿಎಸ್ ಯಡ್ರಾಮಿ ಪಿಎಸ್‌ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಪಡೆದ ಬಳಿಕ ಉಭಯ ಪಿಎಸ್‌ಐಗಳು ಸಾಯಿಬಣ್ಣನನ್ನು ಬಂಧಿಸಿ ತರಲು ವಿಜಯಪುರ ತಾಲೂಕಿನ ಆಲಮೇಲಕ್ಕೆ ಹೋಗಿದ್ದರು. ಬಂಧಿಸಿ ಕರೆ ತರುವಾಗ ಮಾರ್ಗ ಮಧ್ಯೆ ಓಡಿ ಹೋಗಲು ಯತ್ನಿಸಿದಾಗ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಸಂಜೆ ಬಲಿಯಾದ ಪೇದೆಯ ಅಂತ್ಯಕ್ರಿಯೆಯೂ ನಡೆದಿದೆ. ಶುಕ್ರವಾರ ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣನನ್ನು ಬಂಧಿಸಲಾಗಿತ್ತು.