ಪುತ್ತೂರು : ಕಿಲ್ಲೆ ಮೈದಾನದ ಆಸುಪಾಸಿನ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿ ಸಂಚಾರ ವ್ಯವಸ್ಥೆಗೆ ತೊಂದರೆ ಮಾಡುತ್ತಿದ್ದವರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸೋಮವಾರ ಬೆಳಗ್ಗಿನಿಂದಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪಿ.ಎಸ್.ಐ. ನಾರಾಯಣ ರೈ ನೇತೃತ್ವದ ಸಂಚಾರ ಪೊಲೀಸ್ ತಂಡ ವಾಹನಗಳಿಗೆ ದಂಡ ವಿಧಿಸಿತು. ಕಿಲ್ಲೆ ಮೈದಾನದ ಸುತ್ತಮುತ್ತ ರಸ್ತೆಗಳಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಸಹಿತ 26 ವಾಹನಗಳಿಗೆ ಟ್ಯಾಗ್ ಹಾಕಲಾಗಿದೆ. ಅವರು ಇಲಾಖೆಯನ್ನು ಸಂಪರ್ಕಿಸುತ್ತಾರೆ’ ಎಂದು ಸಂಚಾರ ಎಸ್. ಐ. ನಾರಾಯಣ ರೈ ತಿಳಿಸಿದ್ದಾರೆ.
ಸುದಿನ ವರದಿ
ಸರಕಾರಿ ಕಚೇರಿಗಳು ಇರುವ, ಕಿಲ್ಲೆ ಮೈದಾನದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ಸುಗಮ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ನಡೆದಾಡಲೂ ತೊಂದರೆ ಆಗುತ್ತಿರುವ ಕುರಿತು
‘ಉದಯವಾಣಿ’ ಸುದಿನದಲ್ಲಿ ಜೂ. 26ರಂದು ಸಚಿತ್ರ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಸಂಚಾರ ಪೊಲೀಸರು ವಾಹನ ನಿಲುಗಡೆ ಮಾಡುವವರಿಗೆ ಎಚ್ಚರಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಪತ್ರಿಕೆಯ ವರದಿ, ಪೊಲೀಸರ ಕಾರ್ಯಾಚರಣೆಗೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪರಿಸರದಲ್ಲಿ ಮಿನಿ ವಿಧಾನಸೌಧ, ನಗರಸಭೆ ಕಚೇರಿ, ತಾ.ಪಂ. ಕಚೇರಿ, ಕೋರ್ಟು ಸಂಕೀರ್ಣ, ಪುರಭವನ, ಸರಕಾರಿ ಆಸ್ಪತ್ರೆ, ಉಪನೋಂದಣಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಕೇಂದ್ರ ಸೇರಿದಂತೆ ಜನರಿಗೆ ಅತಿ ಅಗತ್ಯವಾದ ಕಚೇರಿಗಳಿವೆ. ಈ ಕಾರಣದಿಂದ ವಾರವಿಡೀ ಜನ ನಿಬಿಡ ಪರಿಸರವಿದು. ಕಿರಿದಾದ ರಸ್ತೆಗಳೂ ಆಗಿರುವುದರಿಂದ ಮತ್ತು ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಆಗುತ್ತಿರುವ ಸಮಸ್ಯೆಗೆ ದಂಡ, ವೀಲ್ ಲಾಕ್ ಪ್ರಯೋಗದ ಎಚ್ಚರಿಕೆಯ ಮೂಲಕ ಸಂಚಾರ ಪೊಲೀಸ್ ಇಲಾಖೆಯೂ ಸಂದೇಶ ನೀಡಿದೆ.
ದಂಡ ವಿಧಿಸಿದ್ದೇವೆ
ಕಿಲ್ಲೆ ಮೈದಾನ ಸುತ್ತಲಿನ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ಸುವ್ಯವಸ್ಥೆಗೆ ಕಷ್ಟವಾಗಿದೆ. ದಂಡ ವಿಧಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನು ಕಠಿನ ಕ್ರಮ ಕೈಗೊಳ್ಳುತ್ತೇವೆ.
– ನಾರಾಯಣ ರೈ, ಸಬ್ ಇನ್‌ಸ್ಪೆಕ್ಟರ್, ಸಂಚಾರ ಪೊಲೀಸ್ ಠಾಣೆ