ಉತ್ತರಪ್ರದೇಶ: ಇಲಿಯ ಬಾಲವನ್ನು ಇಟ್ಟಿಗೆಗೆ ಕಟ್ಟಿ ಚರಂಡಿಯಲ್ಲಿ ಮುಳುಗಿಸಿ ಕೊಂದ ಆರೋಪ ಮೇಲೆ ಉತ್ತರ ಪ್ರದೇಶದ ಬದೌನ್‌ನ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು 30 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತ ವಿಕೇಂದ್ರ ಶರ್ಮಾ ಇಡೀ ಘಟನೆಯನ್ನು ಚಿತ್ರೀಕರಿಸಿ ಆರೋಪಿ ಮನೋಜ್ ಕುಮಾರ್ ವಿರುದ್ಧ ದೂರು ದಾಖಲಿಸಿದ ವೇಳೆ ಈ ವಿಲಕ್ಷಣ ಘಟನೆ ಮುನ್ನೆಲೆಗೆ ಬಂದಿದೆ. ಶರ್ಮಾ ಇಲಿಯನ್ನು ಉಳಿಸಲು ಪ್ರಯತ್ನಿಸಿದರು ಆದರೆ ಅದು ಉಸಿರುಗಟ್ಟಿ ಸಾವನ್ನಪ್ಪಿತು ಎಂದಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ, ಮಾಧ್ಯಮಗಳಲ್ಲಿ ಬಿಡುಗಡೆಯಾದ ವಿಡಿಯೋಗಳನ್ನು ಸಂಬಂಧಿಸಿ ವಿವಿಧ ಇಲಾಖೆಗಳ ತಜ್ಞರ ಅಭಿಪ್ರಾಯಗಳು ಸೇರಿದಂತೆ 30 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 11 (1) (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಮತ್ತು ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು) ಅಡಿಯಲ್ಲಿ ಮನೋಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ರಾಜೇಶ್ ಯಾದವ್ ಅವರು ಚಾರ್ಜ್‌ಶೀಟ್‌ನಲ್ಲಿ ಬರೆದಿದ್ದಾರೆ.
ಏನಿದು ಘಟನೆ?
25 ನವೆಂಬರ್ 2022 ರಂದು ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಬದಯುನ್‌ನ ಗಾಂಧಿ ಗ್ರೌಂಡ್ ರಸ್ತೆಯ ಬಳಿ ಹಾದು ಹೋಗುತ್ತಿದ್ದರು. ಈ ವೇಳೆ ಮನೋಜ್ ಕುಮಾರ್ ಎಂಬ ವ್ಯಕ್ತಿ ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಯಲ್ಲಿ ಮುಳುಗಿಸುತ್ತಿರುವುದನ್ನು ನೋಡಿದ ಅವರು ಅದನ್ನು ವಿಡಿಯೋ ಮಾಡಿದ್ದಾರೆ.
ಮಾತ್ರವಲ್ಲದೆ ಇಲಿಯನ್ನು ರಕ್ಷಿಸಲು ಚರಂಡಿಗೆ ಹಾರಿ ಇಲಿಯನ್ನು ಹೊರತೆಗೆದಿದ್ದಾರೆ. ಅಷ್ಟರೊಳಗೆ ಇಲಿ ಸತ್ತು ಹೋಗಿತ್ತು. ಇದಾದ ನಂತರ ವಿಕೇಂದ್ರ ಬದೌನ್ ಸದರ್ ಕೊತ್ವಾಲಿಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಸದರ್ ಕೊತ್ವಾಲಿ ಪೊಲೀಸರು ಇಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ವರದಿಯ ಆದರದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Putin ಬಲಗೈ, ಬಲಗಾಲಿನ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ, ದೃಷ್ಟಿ ಮಂದವಾಗುತ್ತಿದೆ: ವರದಿ