ಉತ್ತರ ಪ್ರದೇಶ : ಮುಸ್ಲಿಂ ಧರ್ಮಗುರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಯಡಿ ಎಫ್‍ಐಆರ್ ದಾಖಲಾಗಿದೆ.
ಭಾನುವಾರ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಓಲ್ಡ ಸಿಟಿಯ ಮುಸ್ಲಿಂ ಧರ್ಮಗುರು ಅಬ್ದುಲ್ ಹಮೀದ್ ಮೊಹಮ್ಮದ ಸಲಿಮುಲ್ ಸಾವನ್ನಪ್ಪಿದ್ದರು. ಕೋವಿಡ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆ ಅಂತ್ಯಕ್ರಿಯೆಯನ್ನು ಸರಳವಾಗಿ ನಡೆಸಬೇಕಿತ್ತು. ಆದರೆ, ಸಲಿಮುಲ್ ಅವರ ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನರು ಆಗಮಿಸಿದ್ದರು.
ಸಾರ್ವಜನಿಕರ ದರ್ಶನಕ್ಕಾಗಿ ಮೃತ ದೇಹವನ್ನು ಮಸೀದಿಯಲ್ಲಿ ಇಡಲಾಗಿತ್ತು. ನಂತರ ಬದೌನ್ ನಗರದ ಪ್ರಮುಖ ಬೀದಿಗಳಲ್ಲಿ ಶವಯಾತ್ರೆ ನಡೆಸಲಾಯಿತು. ಈ ವೇಳೆ ಸಲಿಮುಲ್ ಅವರ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಬಹುತೇಕ ಜನರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಂತ್ಯ ಸಂಸ್ಕಾರದ ವಿಡಿಯೋ ನೋಡಿ ಜನರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಬಣಗೊಂಡಿದೆ. ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕರ್ಫ್ಯೂ ಘೋಷಣೆಯಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.