ಬೆಂಗಳೂರು: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಶೀಟರ್ ಸ್ಲಂ ಭರತನನ್ನು ಇಂದು ಬೆಳಿಗ್ಗೆ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ತಲೆಮರೆಸಿಕೊಂಡಿದ್ದ ಸ್ಲಂ ಭರತ ಉತ್ತರ ಪ್ರದೇಶದಲ್ಲಿ ಬಂಧಿಯಾಗಿದ್ದ. ಈತನನ್ನು ಬೆಂಗಳೂರಿಗೆ ಕರೆತರುವಾಗ ಪೊಲೀಸ್ ವಾಹನದ ಮೇಲೆ ಸಹಚರರು ದಾಳಿ ನಡೆಸಿದ್ದರು. ಸಹಚರರು ಪೊಲೀಸರ ಮೇಲ ಫೈರಿಂಗ್ ಆರಂಭಿಸಿದ್ದರು. ಈ ವೇಳೆ ಸ್ಲಂ ಭರತ ತಪ್ಪಿಸಿಕೊಂಡಿದ್ದ.
ಇಂದು ಮುಂಜಾನೆ ಐದು ಗಂಟೆ ವೇಳೆಗೆ ಹೆಸರಘಟ್ಟದ ಬಳಿ ಸ್ಲಂ ಭರತ್ ಇದ್ದ ಕಾರನ್ನುಗುರುತಿಸಲಾಗಿದೆ. ರಾಜಗೋಪಾಲ ನಗರ ಠಾಣೆ ಇನ್ಸ್ ಪೆಕ್ಟರ್ ಅವರು ಕಾರನ್ನು ಅಡ್ಡಗಟ್ಟಿದಾಗ ಸ್ಲಂ ಭರತ್ ಇನ್ಸ್ ಪೆಕ್ಟರ್ ಮೇಲೆ ಗುಂಡು ಹಾರಿಸಿದ್ದ. ಎರಡು ಗುಂಡು ಪೊಲೀಸ್ ಕಾರಿಗೆ ತಾಗಿದ್ದರೆ, ಒಂದು ಗುಂಡು ಇನ್ಸ್ ಪೆಕ್ಟರ್ ಹೊಟ್ಟೆಗೆ ತಗುಲಿದೆ. ಆದರೆ ಇನ್ಸ್ ಪೆಕ್ಟರ್ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಕೂಡಲೇ ಇನ್ನೊಬ್ಬ ಇನ್ಸ್ ಪೆಕ್ಟರ್ ಸ್ಲಂ ಭರತ್ ಮೇಲೆ ಗುಂಡು ಹಾರಿಸಿದ್ಧಾರೆ. ಗುಂಡು ತಗುಲಿದ ಭರತ ಸ್ಥಳದಲ್ಲಿ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭರತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಈ ಹಿಂದೆ ನಟ ಯಶ್ ಹತ್ಯೆಗೂ ಸ್ಲಂ ಭರತ ಸಂಚು ರೂಪಿಸಿದ್ದ ಎನ್ನಲಾಗಿದೆ.