Advertisement

ಅಸ್ಸಾಂನಲ್ಲಿ ಮುಂದುವರಿದ ಎನ್ ಕೌಂಟರ್: ಮೂವರು ಡಕಾಯಿತರು ಗುಂಡಿಗೆ ಬಲಿ

01:01 PM Apr 02, 2022 | Team Udayavani |

ಗುವಾಹಟಿ/ ಕೊಕ್ರಜಾರ್ :  ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸುದ್ದಿಯಾಗುತ್ತಿರುವ ಹಿಮಂತ್ ಬಿಸ್ವಾ ಸರ್ಮಾ ಅವರ ಆಡಳಿತವಿರುವ ಅಸ್ಸಾಂನಲ್ಲಿ ಪೊಲೀಸರ ಕಠಿಣ ಕ್ರಮ ಗಳು ಮುಂದುವರಿದಿದ್ದು, ಶುಕ್ರವಾರ ಮೂವರನ್ನು ಹತ್ಯೆಗೈಯಲಾಗಿದೆ.

Advertisement

ಕಳೆದ ಒಂದು ತಿಂಗಳಿನಿಂದ ಡಕಾಯಿತರು ಮತ್ತು ಕೊಲೆ ಆರೋಪಿಗಳ ತಂಡವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಗೋಲ್ಪಾರಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರೆಡ್ಡಿ ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪೊಲೀಸರು ರಾತ್ರಿ 8.30 ರ ಸುಮಾರಿಗೆ ಗೋಲ್ಪಾರಾದ ಅಜಿಯಾದಲ್ಲಿ ಅಡಿಕೆ ಸಾಗಿಸುತ್ತಿದ್ದ ವಾಹನವನ್ನು ತಡೆದಿದ್ದು,ವಾಹನದಲ್ಲಿ ಪ್ರಯಾಣಿಸುತ್ತಿದ್ದವರನ್ನು ಹೊರಗೆ ಬರುವಂತೆ ಕೇಳಿದಾಗ ಅವರು ನಿರಾಕರಿಸಿದರು, ನಂತರ ಪೊಲೀಸರು ವಾಹನದ ಟೈರ್‌ಗಳಿಗೆ ಗುಂಡು ಹಾರಿಸಿದರು ಎಂದು ಅಧಿಕಾರಿ ಹೇಳಿದರು.

ಶಂಕಿತ ಡಕಾಯಿತರು ಕೂಡ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದ್ದು, ಇದು ಗುಂಡಿನ ಚಕಮಕಿಗೆ ಕಾರಣವಾಯಿತು. ಮೂವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಗೋಲ್‌ಪಾರಾ ಸಿವಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮೃತರು ಶಹಜೆಹಾನ್ ಅಲಿ ಮತ್ತು ಸುಷೇನ್ ಅಲಿ ಎಂದು ಗುರುತಿಸಲಾಗಿದೆ.

ಉಗ್ರಗಾಮಿ ಅಂತ್ಯ

Advertisement

ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದ ಎರಡನೇ ಘಟನೆಯಲ್ಲಿ, 10-15 ಡಕಾಯಿತರ ತಂಡವನ್ನು ಮುನ್ನಡೆಸುತ್ತಿದ್ದ ಮಾಜಿ ಎನ್‌ಎಲ್‌ಎಫ್‌ಬಿ ಉಗ್ರಗಾಮಿಯನ್ನು ಚಿರಾಂಗ್ ಜಿಲ್ಲೆಯಿಂದ ಗುರುವಾರ ಬಂಧಿಸಲಾಗಿತ್ತು.

ಲೂಟಿ ಮಾಡಿದ ಚಿನ್ನಾಭರಣಗಳು ಮತ್ತು ಅಲ್ಲಿ ಬಚ್ಚಿಟ್ಟಿದ್ದ ಹಣವನ್ನು ಹಿಂಪಡೆಯಲು ಪೊಲೀಸರು ಅವನನ್ನು ಕೊಕ್ರಜಾರ್‌ನ ಉಲ್ತಾಪಾನಿ ಮೀಸಲು ಅರಣ್ಯಕ್ಕೆ ಕರೆದೊಯ್ದಿದ್ದರು. ಸ್ಥಳವನ್ನು ತಲುಪುತ್ತಿದ್ದಂತೆ, ಮಾಜಿ ಉಗ್ರಗಾಮಿ ರಿವಾಲ್ವರ್ ಎತ್ತಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವನು ಓಡಲು ಪ್ರಾರಂಭಿಸಿದಾಗ, ಪೊಲೀಸರು ಗುಂಡು ಹಾರಿಸಿದ್ದು, ಅವನನ್ನು ಕೊಕ್ರಜಾರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಚಿನ್ನಾಭರಣಗಳು, 1 ಲಕ್ಷ ರೂಪಾಯಿ ನಗದು ಹಾಗೂ 7.65 ಎಂಎಂ ಪಿಸ್ತೂಲ್ ಹಾಗೂ ನಾಲ್ಕು ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೀಡಾದ ಮಾಜಿ ಉಗ್ರ ಸಂಜುಲಾ ವಾರಿ ಎಂದು ಗುರುತಿಸಲಾಗಿದೆ.

ಅಸ್ಸಾಂ ನಲ್ಲಿ ಮೇ 2021 ರಿಂದ ಈ ರೀತಿ 30  ಕ್ಕೂ ಹೆಚ್ಚು ಎನ್ ಕೌಂಟರ್ ಗಳು ನಡೆದಿದ್ದು, ಈ ಬಗ್ಗೆ ವಕೀಲ ಆರೀಫ್ ಜ್ವಾದರ್ ಎನ್ನುವವರು ಇವೆಲ್ಲ ನಕಲಿ ಎಂದು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ, ಹೊರ ರಾಜ್ಯಗಳ ಪೊಲೀಸ್ ತಂಡಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಅವರು ಗೃಹ ಖಾತೆಯನ್ನೂ ನಿಭಾಯಿಸುತ್ತಿದ್ದು, ಕ್ರಿಮಿನಲ್ ಗಳ ಮೇಲೆ ಕಠಿಣ ಕ್ರಮ ಮತ್ತು ಪೊಲೀಸರಿಗೆ ಇಂತಹ ತುರ್ತು ಕ್ರಮ ಕೈಗೊಳ್ಳಲು ಆದೇಶ ನೀಡಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next