ದಾವಣಗೆರೆ: ಪೊಲೀಸರು ವೃತ್ತಿಪರತೆ ವೃದ್ಧಿಸಿಕೊಳ್ಳಲು ಪೊಲೀಸ್ ಕರ್ತವ್ಯ ಕೂಟ ಸಹಕಾರಿಯಾಗಲಿದೆ ಎಂದು ಪೂರ್ವ ವಲಯ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕ ಬಿ. ದಯಾನಂದ್ ಅಭಿಪ್ರಾಯಪಟ್ಟರು. ಶುಕ್ರವಾರ, ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಸಮಾರೋಪದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದೇಶದಲ್ಲಿ ಪೊಲೀಸ್ ಕರ್ತವ್ಯ ಕೂಟ ನಡೆಯುತ್ತವೆ.
ಅದಕ್ಕೆ ವಲಯ ಮಟ್ಟ, ರಾಜ್ಯಮಟ್ಟದಲ್ಲಿ ವಿಜೇತ ಪೊಲೀಸ್ ಸಿಬ್ಬಂದಿ ಆಯ್ಕೆ ಮಾಡಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು. ಕರ್ತವ್ಯ ಕೂಟದಲ್ಲಿ ಪೊಲೀಸರು ತಮ್ಮ ದೈನಂದಿನ ವೃತ್ತಿ ಬದುಕಿನಲ್ಲಿ ನಿರ್ವಹಿಸುವ ಕರ್ತವ್ಯದ ಆಧಾರಿತವಾಗಿಯೇ ಸ್ಪರ್ಧೆ ಆಯೋಜಿಸುವುದರಿಂದ ವೃತ್ತಿ ನೈಪುಣ್ಯತೆ ಸಾಧಿಸಲು ಕರ್ತವ್ಯ ಕೂಟಗಳು ಸಾಕಷ್ಟು ಅನುಕೂಲ ಆಗುತ್ತಿವೆ ಎಂದರು.
ಈ ಹಿಂದೆ ರಾಷ್ಟ್ರಮಟ್ಟದ ಕರ್ತವ್ಯಕೂಟಕ್ಕೆ ಕೆಲವೇ ಪೊಲೀಸರು ಮಾತ್ರ ರಾಜ್ಯಮಟ್ಟದಿಂದ ಆಯ್ಕೆಯಾಗಿ ಸ್ಪರ್ಧಿಸುತ್ತಿದ್ದರು. ಹಾಗಾಗಿ ಹೆಚ್ಚಿನ ಬಹುಮಾನಗಳು ಕರ್ನಾಟಕಕ್ಕೆ ಬರುತ್ತಿರಲಿಲ್ಲ. ಈಚೆಗೆ ಕರ್ನಾಟಕದಲ್ಲಿ ಪೊಲೀಸ್ ಕರ್ತವ್ಯ ಕೂಟದಲ್ಲಿ ಪೊಲೀಸ್ ಸಿಬ್ಬಂದಿಗೆ ಉತ್ತಮ ತರಬೇತಿ ನೀಡಿ ಪ್ರೋತ್ಸಾಹ ನೀಡುತ್ತಿರುವುದರಿಂದ ಉತ್ತಮ ಸ್ಪರ್ಧಾಗಳುಗಳನ್ನು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಪೊಲೀಸ್ ಸಿಬ್ಬಂದಿ ಕರ್ತವ್ಯ ಕೂಟಗಳಲ್ಲಿ ಕೇವಲ ಬಹುಮಾನಕ್ಕಾಗಿ ಭಾಗವಹಿಸಬೇಡಿ. ಬದಲಾಗಿ ಇಂತಹ ಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ವೃತ್ತಿ ಬಗ್ಗೆ ಸಾಕಷ್ಟು ಅನುಭವ ಹಾಗೂ ಉನ್ನತ ಅಧಿಕಾರಿಗಳ ಪರಿಚಯ ಸಂಪರ್ಕ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಈಗಾಗಲೇ 6 ಜಿಲ್ಲೆಗಳಲ್ಲಿ ವಲಯ ಮಟ್ಟದ ಕರ್ತವ್ಯಕೂಟ ಆಯೋಜಿಸಿದ್ದು, ನ.17ರಂದು ಬಳ್ಳಾರಿ ಜಿಲ್ಲೆಯಲ್ಲಿ ಆರಂಭವಾಗಲಿದೆ ಎಂದರಲ್ಲದೇ, ಕಳೆದ ಬಾರಿ ಚೆನ್ನೆನಲ್ಲಿ ನಡೆದ ರಾಷ್ಟ್ರಮಟ್ಟದ ಕರ್ತವ್ಯಕೂಟದಲ್ಲಿ ಯಾವುದೇ ಬಹುಮಾನಗಳು ದೊರೆತಿಲ್ಲ. ಹಾಗಾಗಿ ಇದೀಗ ವಲಯ ಮಟ್ಟದ ಕರ್ತವ್ಯ ಕೂಟದಿಂದ ರಾಜ್ಯಮಟ್ಟದ ಕರ್ತವ್ಯ ಕೂಟಕ್ಕೆ ಆಯ್ಕೆಯಾಗುವ ಸಿಬ್ಬಂದಿ, ಫೆ. 12 ರಿಂದ
16ರ ವರೆಗೆ ಲಖನೌನಲ್ಲಿ ನಡೆಯುವ ರಾಷ್ಟ್ರಮಟ್ಟದ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.
ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ವಿಜೇತರಿಗೆ ಇದೇ ಸಂದರ್ಭದಲ್ಲಿ ನಗದು ಬಹುಮಾನ ಘೋಷಿಸಿದರು. 2 ದಿನಗಳ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಹಾವೇರಿ ಪೊಲೀಸ್ ತಂಡ ಸಮಗ್ರ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಪೊಲೀಸ್ ತಂಡಕ್ಕೆ ಬೆಸ್ಟ್ ಬಿಡಿಡಿಎಸ್ ಪ್ರಶಸ್ತಿ ಹಾಗೂ ಬೆಸ್ಟ್ ಡಾಗ್ ಸ್ಕಾಡ್ ಪ್ರಶಸ್ತಿಯನ್ನು ಐಜಿಪಿ ಬಿ. ದಯಾನಂದ್ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್, ಹಾವೇರಿ ಎಸ್ಪಿ ಕೆ. ಪರಶುರಾಮ್, ಚಿತ್ರದುರ್ಗ ಎಸ್ಪಿ ಡಾ| ಅರುಣ್, ಕಾರ್ಯಕ್ರಮಾಧಿಕಾರಿ ನಾಗೇಶ್ ಇತರರು ಉಪಸ್ಥಿತರಿದ್ದರು.