ಬೀದರ: ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ನಂಬಿಕೆ ಮತ್ತು ವಿಶ್ವಾಸಕ್ಕೆ ಪ್ರತೀಕವಾಗಿ ಕರ್ತವ್ಯ ನಿರ್ವಹಿಸಿದ್ದ ‘ಬ್ರೂನೊ’ ಹೆಸರಿನ ಶ್ವಾನ ರವಿವಾರ ಕೊನೆಯುಸಿರೆಳೆಯಿತು. ಶಾಸ್ತ್ರೋಸ್ತ್ರವಾಗಿ ಅಂತ್ಯಸಂಸ್ಕಾರ, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದ ಖಾಕಿ ಪಡೆ ನೆಚ್ಚಿನ ಬ್ರೂನೊಗೆ ಕಂಬನಿ ಮಿಡಿಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನ ರವಿವಾರ ಬೆಳಿಗ್ಗೆ ಅಗಲಿದೆ.10.6 ವರ್ಷಗಳ ಕಾಲ ಸುದೀರ್ಘ ಕರ್ತವ್ಯ ನಿರ್ವಹಿಸಿದ್ದ ಬ್ರೂನೊ ಜಿಲ್ಲಾ ಪೊಲೀಸ್ ಶ್ವಾನ ದಳ ಘಟಕ ಹೆಮ್ಮೆಯ ಶ್ವಾನ ಎನಿಸಿಕೊಂಡಿತ್ತು. ಪೊಲೀಸ್ ಹೆಡ್ ಕ್ವಾಟರ್‌ನಲ್ಲಿ ಮೃತ ಶ್ವಾನಕ್ಕೆ ಹೂವಿನ ಹಾರ ಹಾಕಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಇಲಾಖೆ ಬಲದಂತಿದ್ದ ಬ್ರೂನೊ, ಸಿಬ್ಬಂದಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಶ್ವಾನ ದಳದ ಸಿಬ್ಬಂದಿಗಳಲ್ಲಿ ದು:ಖ ಮಡುಗಟ್ಟಿತ್ತು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ವಿಐಪಿ, ವಿವಿಐಪಿಗಳಿಗೆ, ಅಧಿವೇಶನ ಮತ್ತು ಉತ್ಸವಗಳ ಭದ್ರತೆ ವಿಚಾರದಲ್ಲಿ ಕರ್ತವ್ಯನಿರ್ವಹಿಸಿದ್ದ ಬ್ರೂನೊ ಜಿಲ್ಲೆಯ ಎಎಸ್‌ಪಿ ತಂಡದ ಜತೆಗೆ ಸತತವಾಗಿ ಕರ್ತವ್ಯ ನಿರ್ವಹಿಸಿತ್ತು. ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಾದ ವಾಯು ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನ್ಯಾಯಾಲಯ ಸಂಕೀರ್ಣ ಹಾಗೂ ಸಂಶಯಾಸ್ಪದ ಸ್ಥಳಗಳನ್ನು ಪರಿಶೀಲನಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಬ್ರೂನೊ ಶ್ವಾನದ ಹಿರಿಮೆಯಾಗಿದೆ. ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ 3 ಸಲ ಮೊದಲನೇ ಸ್ಥಾನ,5 ಸಲ ಎರಡನೇ ಸ್ಥಾನ ಪಡೆದಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಶಿವನಗೌಡ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ತನ್ನ ಕರ್ತವ್ಯದ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಕೀರ್ತಿಯನ್ನು ಹೆಚ್ಚಿಸಿದ್ದ ಶ್ವಾನ ಬ್ರೂನೊ ಸಾಯುವ ಕೊನೆ ಹಂತದವರೆಗೂ ಕೆಲಸ ನಿರ್ವಹಿಸಿತ್ತು. ಅಪರಾಧ ಪತ್ತೆ, ಭದ್ರತೆ ವಿಷಯದಲ್ಲಿ ಶ್ವಾನ ದಳ ಘಟಕ ಪಾತ್ರ ಮಹತ್ವದ್ದಾಗಿದ್ದು, ಬ್ರೂನೊ ನಂಬಿಕೆ, ವಿಶ್ವಾಸಕ್ಕೆ ಪ್ರತೀಕವಾಗ ಕೆಲಸ ಮಾಡಿದೆ. ಶ್ವಾನ ನಿಧನದಿಂದ ಜಿಲ್ಲಾ ಪೊಲೀಸ್‌ಗೆ ತುಂಬಲಾರದ ನಷ್ಟವಾಗಿದೆ.
– ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಎಸ್‌ಪಿ.