Advertisement

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

08:14 AM Jun 23, 2024 | Team Udayavani |

ಹಾಸನ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಹಿರಿಯ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‌ ರೇವಣ್ಣ ಅವರ ವಿರುದ್ಧದ ಅನೈಸರ್ಗಿಕ ಲೈಂಗಿಕ ಕ್ರಿಯೆ ಎಸಗಿದ ಆರೋಪ ಸಂಬಂಧ ಹೊಳೆ ನರಸೀ ಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿವಾರ ಬಂಧಿಸಿದ್ದಾರೆ

Advertisement

ದೂರಿನ ಬೆನ್ನಲ್ಲೇ ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಶನಿವಾರ ರಾತ್ರಿ ಹಾಸನದ ಸಿಇಎನ್‌ ಠಾಣೆಯಲ್ಲಿ ವಿಚಾರಣೆ ನಡೆಸಿ ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದರು.

ಏನಿದು ಪ್ರಕರಣ?: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ.16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ಸಂಭೋಗ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಸೂರಜ್‌ ರೇವಣ್ಣ ಮತ್ತು ಹನುಮನಹಳ್ಳಿಯ ಶಿವಕುಮಾರ್‌ ಎಂಬವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ಅವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರಕಲಗೂಡು ತಾಲೂಕಿನ ಹಳ್ಳಿಯೊಂದರ ಸಂತ್ರಸ್ತ ಯುವಕ ಮನವಿ ಮಾಡಿದ್ದಾನೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಐಪಿಸಿ ಕಲಂ 377, 342, 506, 34ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಂತ್ರಸ್ತ ಯುವಕ 14 ಪುಟಗಳ ದೂರು ಬರೆದು, ಬೆಂಗಳೂರಿನಲ್ಲಿ ಡಿಜಿಪಿ ಕಚೇರಿಗೂ ದೂರು ನೀಡಿದ್ದ. ಆ ದೂರಿನ ಪ್ರತಿಯು ಹಾಸನ ಎಸ್ಪಿಗೂ ಮೇಲ್‌ ಮೂಲಕ ತಲುಪಿತ್ತು. ಜೊತೆಗೆ ಸಿಎಂ, ಡಿಸಿಎಂ, ಗೃಹ ಸಚಿವರಿಗೂ ದೂರು ಪ್ರತಿಯನ್ನು ರವಾನಿಸಿದ್ದ ಎನ್ನಲಾಗಿದೆ. ಹಾಸನ ಎಸ್ಪಿ ಕಚೇರಿಗೆ ಬಂದ ದೂರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

ಪ್ರಕರಣ ದಾಖಲಿಸಿ ದೂರಿನ ಸತ್ಯಾಸತ್ಯತೆಗಾಗಿ ದೂರುದಾರನನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರನನ್ನು ಸಂಪರ್ಕಿಸಿದ ಹೊಳೆನರಸೀಪುರ ಪೊಲೀಸರು ಠಾಣೆಗೆ ಬಂದು ದೂರು ದಾಖಲಿಸ  ಬೇಕು ಎಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂತ್ತಸ್ತ ಯುವಕ ಬೆಂಗಳೂರಿನಿಂದ ಬಂದು ದೂರು ದಾಖಲು ಮಾಡಿದ್ದಾನೆ.

Advertisement

ಸೂರಜ್‌ ರೇವಣ್ಣ ವಿಚಾರಣೆ: ದೂರು ಬಂದ ಬೆನ್ನಲ್ಲೇ ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹಾಸನದ ಸಿಇಎನ್‌ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಹೊಳೆನರಸೀಪುರದ ಪೊಲೀಸರು ಸೂರಜ್‌ ಅವರ ಗನ್ನಿಕಡದ ತೋಟದ ಮನೆಯಿಂದ ಸೂರಜ್‌ ಅವರ ಇನ್ನೋವಾ ಕಾರಿನಲ್ಲಿಯೇ ಹಾಸನದ ಸಿಇಎನ್‌ ಪೊಲೀಸ್‌ ಠಾಣೆಗೆ ಕರೆತಂದರು. ಸಂತ್ರಸ್ತ ಯುವಕ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ ಸಂಬಂಧದ ಆಡಿಯೋಗಳನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು, ಇನ್ನಷ್ಟು ಆಡಿಯೋ ಸೇರಿ ಹಲವು ದಾಖಲೆಗಳನ್ನು ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ.

ಸಂತ್ರಸ್ತನ ವಿರುದ್ಧವೇ ಎಫ್ಐಆರ್‌: ಸೂರಜ್‌ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂತ್ರಸ್ತನ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 384, 506ರ ಅಡಿಯಲ್ಲಿ ಶುಕ್ರವಾರ ಎಫ್ಐಆರ್‌ ದಾಖಲಾಗಿದೆ. ಯುವಕ ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ ಆರೋಪ ಮತ್ತು ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡೋದಾಗಿ ಬೆದರಿಕೆ ಹಾಕಿದ ಬಗ್ಗೆ ಎಂಎಲ್‌ಸಿ ಅವರ ಆಪ್ತ ಶಿವಕುಮಾರ್‌ ಎಂಬುವರು ನೀಡಿರುವ ದೂರು ಆಧರಿಸಿ ಎಫ್ ಐಆರ್‌ ದಾಖಲಾಗಿದೆ. 5 ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲಿಸುತ್ತೇನೆಂದು ಯುವಕ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ಸೂರಜ್‌ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳುತ್ತಿರುವ ಯುವಕ ಆರಂಭದಲ್ಲಿ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಂತರ 3, ಬಳಿಕ 2 ಕೋಟಿಗೆ ಬಂದ. ಆದರೆ ನಾನೇನು ತಪ್ಪು ಮಾಡಿಲ್ಲ, ನಾನೇಕೆ ಹಣ ಕೊಡಬೇಕು ಎಂದು ಸೂರಜ್‌ ಅವರು ನಿರಾಕರಿಸಿದಾಗ ಆತ ದೂರು ನೀಡಿದ್ದಾನೆ ಎಂದು ಸೂರಜ್‌ ಬ್ರಿಗೇಡ್‌ ಖಜಾಂಚಿ ಶಿವಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ಸೂರಜ್ಮೇಲಿನ ಆರೋಪ ಏನು?

ಜೂ.16ರಂದು ಸೂರಜ್‌ ರೇವಣ್ಣ ನನ್ನನ್ನು ಅವರ ತೋಟದ ಮನೆಗೆ ಕರೆಸಿಕೊಂಡಿದ್ದರು

ಅಲ್ಲಿ ಅನೈಸರ್ಗಿಕವಾಗಿ ಲೈಂಗಿಕ ಸಂಭೋಗ ನಡೆಸಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ

ಸೂರಜ್‌ ಮತ್ತು ಹನುಮನಹಳ್ಳಿಯ ಶಿವಕುಮಾರ್‌ರಿಂದ ನನಗೆ, ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ.

ಅವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ ಸಂತ್ರಸ್ತ

14 ಪುಟಗಳ ದೂರಿನ ಪ್ರತಿಯನ್ನು ಡಿಜಿಪಿ ಕಚೇರಿ, ಸಿಎಂ, ಡಿಸಿಎಂ, ಗೃಹ ಸಚಿವರಿಗೂ ರವಾನೆ

ಏನು ಸೆಕ್ಷನ್‌? ಏನು ಶಿಕ್ಷೆ?

ಐಪಿಸಿ 377: ಅಸಹಜ ಲೈಂಗಿಕ ಕ್ರಿಯೆ (ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ)

ಐಪಿಸಿ 342: ವ್ಯಕ್ತಿಯ ಅಕ್ರಮ ಬಂಧ (1 ವರ್ಷ ದವರೆಗಿನ ಸಾಧಾರಣ ಜೈಲು ಶಿಕ್ಷೆ ಮತ್ತು ದಂಡ)

ಐಪಿಸಿ 506: ಬೆದರಿಕೆ (2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ)

ಐಪಿಸಿ 34: ಪ್ರಕರಣದಲ್ಲಿ ಹಲವರ ಭಾಗಿ

Advertisement

Udayavani is now on Telegram. Click here to join our channel and stay updated with the latest news.

Next