ಬೆಂಗಳೂರು: ತನ್ನ ಬಳಿಯಿದ್ದ ಹಣ ಪೊಲೀಸರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ಅವಾಚ್ಯವಾಗಿ ನಿಂದಿಸಿದ್ದ ಸೆಲ್ಫಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ರಾಕೇಶ್ (22) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ. ಒಂಬತ್ತನೇ ತರಗತಿ ವ್ಯಾಸಂಗ ಮಾಡಿರುವ ರಾಕೇಶ್ ಮೂರು ವರ್ಷಗಳಿಂದ ಮೆಜೆಸ್ಟಿಕ್ ಸಮೀಪದಲ್ಲಿರುವ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ ಮಲ್ಲೇಶ್ವರದಲ್ಲಿರುವ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮದ್ಯ ಸೇವನೆ ಸೇರಿ ಹಲವಾರು ದುಶ್ಚಟಗಳ ಅಭ್ಯಾಸ ಹೊಂದಿದ್ದ. ಅಲ್ಲದೇ ಮಂಗಳಮುಖಿಯರ ಜತೆ ಸ್ನೇಹ ಬೆಳೆಸಿದ್ದ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.
ಈ ಮಧ್ಯೆ ಸೆ.14ರಂದು ಆರೋಪಿ ಮೆಜೆಸ್ಟಿಕ್‌ನ ಬಸ್ ನಿಲ್ದಾಣದಲ್ಲಿ ಪರಿಚಯಸ್ಥ ಮಂಗಳಮುಖಿಯೊಬ್ಬರ ಜತೆ ಸಾರ್ವಜನಿಕವಾಗಿ ಅಸಭ್ಯವಾಗಿ ನಿಂತಿದ್ದ. ಅದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪೊಲೀಸ್ ಸಹಾಯವಾಣಿ ನಮ್ಮ-100ಕ್ಕೆ ದೂರು ನೀಡಿದ್ದು, ವಿಷಯ ತಿಳಿದ ಉಪ್ಪಾರಪೇಟೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಆತನನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು.
ಸೆಲ್ಫಿ ವಿಡಿಯೋ ಮಾಡಿದ: ಅದರಿಂದ ಕುಪಿತಗೊಂಡಿದ್ದ ಆರೋಪಿ ಎರಡು ದಿನಗಳ ಬಳಿಕ ಸೆಲ್ಫಿ ವಿಡಿಯೋ ಮಾಡಿ ಉಪ್ಪಾರಪೇಟೆ ಪೊಲೀಸರು ಹಾಗೂ ಇಡೀ ಕರ್ನಾಟಕ ಪೊಲೀಸರ ಬಗ್ಗೆಯೇ ಅಶ್ಲೀಲ ಪದಗಳಿಂದ ನಿಂದಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. “ಮಹದೇಶ್ವರ ಬೆಟ್ಟಕ್ಕೆ ಹೊರಟ್ಟಿದ್ದ ತನ್ನನ್ನು ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆಂದು ಕರೆದೊಯ್ದು, ತನ್ನ ಹಣವನ್ನು ಕಸಿದುಕೊಂಡು ಕೇವಲ ಒಂದು ಸಾವಿರ ರೂ. ಮಾತ್ರ ಬಿಟ್ಟಿದ್ದಾರೆ.
ಅಂತಹ ಪೊಲೀಸರನ್ನು ಬಿಡಬಾರದು ಎಂದೆಲ್ಲ ನಿಂದಿಸಿದ್ದ. ಈ ಸಂಬಂಧ ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಕಾಡುಗೋಡಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.