Advertisement

ಪೊಲೀಸ್‌ ಇಲಾಖೆ ತೊಂದರೆ ಕೊಡುವ ಇಲಾಖೆ ಎಂದು ಭಾವಿಸಬೇಡಿ: ಡಿಸಿಪಿ ದಿನೇಶ್‌

12:44 PM Feb 20, 2024 | Team Udayavani |

ಉಳ್ಳಾಲ: ಪೊಲೀಸರನ್ನು ತೊಂದರೆ ಕೊಡುವವರು ಎಂಬ ತಪ್ಪು ಭಾವನೆಯಿಂದ ಖಾಸಗಿ ಬಸ್‌ ಸಿಬಂದಿಗಿದೆ. ದಂಡ ಪಾವತಿಸುವ ಮೂಲಕ ಸಿಬಂದಿ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮಾಡುತ್ತಿಲ್ಲ. ಜೀವಹಾನಿ, ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮೋಟಾರು ವಾಹನ ಕಾಯಿದೆಯ ಅನುಷ್ಠಾನವನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ ಎಂಬುದನ್ನು ಬಸ್‌ ಸಿಬಂದಿ
ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್‌ ಉಪ ಆಯುಕ್ತ ಬಿ.ಪಿ.ದಿನೇಶ್‌ ಕುಮಾರ್‌
ಹೇಳಿದರು.

Advertisement

ಅವರು ಪೂರ್ವ ವಲಯ ಬಸ್‌ ಮಾಲಕರ ಒಕ್ಕೂಟ, ಉಳ್ಳಾಲ ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ಬೆಂದೂರು ಸೆಬಾಸ್ಟಿಯನ್‌ ಕಮ್ಯುನಿಟಿ ಸಭಾಂಗಣದಲ್ಲಿ ಜರಗಿದ ಮಾರ್ಗದರ್ಶನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉಪಸಾರಿಗೆ ಅಧಿಕಾರಿ ವಿಶ್ವನಾಥ್‌ ನಾಯಕ್‌, ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ಮಹಮ್ಮದ್‌ ಮೋನು, ಶ್ರೀ ಮಂಗಳಾದೇವಿ ಸೇವಾ ಸಮಿತಿ ಅಧ್ಯಕ್ಷ ದಿಲ್‌ ರಾಜ್‌ ಆಳ್ವ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಬಸ್‌ ಮಾಲಕರ ಸಂಘ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ನೋ ಹಾರ್ನ್, ಝೋನ್‌ನಲ್ಲಿ ಹಾರ್ನ್ ಬಳಸದಿರಿ. ಪ್ರಯಾಣಿಕರಿಂದ 10 ರೂ. ಕಾಯಿನ್‌ ಪಡೆಯದೆ ಸತಾಯಿಸದಿರಿ, ಪ್ರಯಾಣಿಕರು ವಾಪಸ್ಸು ಪಡೆಯದೇ ಇದ್ದಲ್ಲಿ ಮಾಲಕರಿಗೆ ನೀಡಿ. ವಿದ್ಯಾರ್ಥಿಗಳು ಹಣ ಕೊಟ್ಟು ಪಡೆಯುವ ಚಲೋ ಕಾರ್ಡ್‌ ರಿಜೆಕ್ಟ್ ಮಾಡದೆ ಸ್ವೀಕರಿಸಿ. ವಿದ್ಯಾರ್ಥಿಗಳ ಬಳಿ ಹಣವಿಲ್ಲದಿದ್ದರೂ ಪ್ರಯಾಣಿಸಲು ಅವಕಾಶ ಕಲ್ಪಿಸಿ ಶಿಕ್ಷಣಕ್ಕೆ ಪ್ರೋತ್ಸಾಹಿಸಿರಿ ಎಂದರು.

ಚಾಲಕ ಅಲ್ತಾಫ್‌ ತಮ್ಮ ಅಹವಾಲನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಕೃಷ್ಣಾನಂದ ಜಿ.ನಾಯಕ, ಸಂಚಾರ ಪೂರ್ವ ಠಾಣೆಯ ಆನಂದ್‌ ಇ., ಸಂಚಾರ ಪಶ್ಚಿಮ ಪೊಲೀಸ್‌ ನಿರೀಕ್ಷಕ ಡಿ.ಹುಳುಗಪ್ಪ, ಗೌರವಾಧ್ಯಕ್ಷ ಎನ್‌.ಎಸ್‌.ಕರೀಂ, ಬಸ್‌ ಮಾಲಕರಾದ  ಜಯರಾಮ್‌ ಶೇಖ, ರಾಮಚಂದ್ರ ಪಿಲಾರ್‌, ಫ್ರಾನ್ಸಿಸ್‌ ಡಿ’ಸೋಜಾ, ಗಣೇಶ್‌ ಶೆಟ್ಟಿ, ಪ್ರ.ಕಾರ್ಯದರ್ಶಿ ಅನೀಶ್‌ ಶೆಟ್ಟಿ, ಕೋಶಾಧಿಕಾರಿ ಅಬ್ದುಲ್‌ ಮಜೀದ್‌, ಜತೆ ಕಾರ್ಯದರ್ಶಿ ಅವಿನ್‌ ಉಪಸ್ಥಿತರಿದ್ದರು. ಸಚಿನ್‌ ಬೆಳ್ತಂಗಡಿ ನಿರೂಪಿಸಿದರು. ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿದರು. ಶಬರೀಶ್‌ ಶೆಟ್ಟಿ ವಂದಿಸಿದರು.

Advertisement

ಕಾನೂನು ಪರಿಪಾಲನೆ

ಮಂಗಳೂರಿನಲ್ಲಿ ಅನುಭವಸ್ಥ ಚಾಲಕರು, ನಿರ್ವಾಹಕರಿದ್ದಾರೆ. ಖಾಸಗಿ ಬಸ್‌ ಜಿಲ್ಲೆ, ಹೊರಜಿಲ್ಲೆಯವರಿಗೆ ಜೀವಾಳ. ಉತ್ತಮ ಸೇವೆಯನ್ನು ಸಿಬಂದಿ ನೀಡುತ್ತಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಅಪಘಾತಗಳನ್ನು ಕಡಿಮೆಗೊಳಿಸಲು ಕ್ರಮಕ್ಕೆ ಆದೇಶಿಸಿದೆ.
ಹಣ ಸಂಪಾದನೆಯಲ್ಲಿ ಮಾತ್ರ ದೃಷ್ಟಿಯಿರದೆ. ನಮ್ಮನ್ನು ನಂಬುವವರ ಸುರಕ್ಷೆಯೂ ಅಗತ್ಯ. ಕೇಂದ್ರ ಸರಕಾರದ ರಸ್ತೆ ಸುರಕ್ಷೆ ಮಾಸಾಚರಣೆ ಪ್ರತಿ ವರ್ಷವೂ ಇಲಾಖೆ ತಿಂಗಳ ಕಾಲ ನಡೆಸುತ್ತಿದೆ. ಕಾನೂನು ಪರಿಪಾಲನೆಯ ಜಾಗೃತಿಯನ್ನು ಈ ಮೂಲಕ ನೀಡಲಾಗುತ್ತಿದೆ. ಕನಿಷ್ಠ ನಿಯಮಗಳನ್ನು ಬಸ್‌ ಚಾಲಕರು ಪಾಲಿಸಬೇಕಿದೆ ಎಂದು ಮಂಗಳೂರು ನಗರ ಪೊಲೀಸ್‌ ಉಪ ಆಯುಕ್ತ ಬಿ.ಪಿ.ದಿನೇಶ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next