Advertisement

ಮುಂದಿನ ವಾರ ಸಪ್ತಪದಿ ತುಳಿಯಬೇಕಿದ್ದ ಪೇದೆ ಅಪಘಾತಕ್ಕೆ ಬಲಿ

07:57 AM May 15, 2020 | Hari Prasad |

ಚಿಕ್ಕೋಡಿ: ಮುಂದಿನ ವಾರ ಸಪ್ತಪದಿ ತುಳಿಯಬೇಕಿದ್ದ ಚಿಕ್ಕೋಡಿ‌ ಪೊಲೀಸ್ ಠಾಣೆಯ ಪೇದೆ ಕರ್ತವ್ಯ ಮುಗಿಸಿ ಊರಿಗೆ ತೆರಳುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ಗುರುವಾರ ರಾತ್ರಿ ಸಂಭವಿಸಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

Advertisement

ರಮೇಶ ನಾಯಿಕ(25) ಎಂಬ ಪೇದೆ ಮೃತಪಟ್ಟಿದ್ದಾನೆ. ಪೇದೆ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದ ಮೇಲೆ ತನ್ನ ಊರು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ತೆರಳುವಾಗ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ನಾಗರಮುನ್ನೋಳ್ಳಿ ಗ್ರಾಮ ವ್ಯಾಪ್ತಿಯ ಬೆಳಗಲಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.‌ ಡಿಕ್ಕಿಯ ರಭಸಕ್ಕೆ‌ ನೆಲಕ್ಕುರುಳಿದ ಪೇದೆಯ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆಯೇ ರಮೇಶ ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದರು. ಆರು ತಿಂಗಳ ಹಿಂದೆಯೇ ಬೆಂಗಳೂರಿನಿಂದ ಚಿಕ್ಕೋಡಿ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಮೇ 19ರಂದು ಪೇದೆ ರಮೇಶನ ಮದುವೆ ನಿಶ್ಚಯವಾಗಿತ್ತು.

ಲಾಕ್ ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ಮದುವೆ ಸಮಾರಂಭ ನಡೆಯಬೇಕಿತ್ತು. ಗುರುವಾರ ಸಂಜೆಯೇ ಠಾಣೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಮದುವೆ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ವಿಧಿ ಪೇದೆಯನ್ನು ಮದುವೆಗೆ ಮುನ್ನವೇ ಬಲಿ ಪಡೆದುಕೊಂಡಿದೆ. ಮನೆಯಲ್ಲಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದರು. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next