ಕಲಬುರಗಿ: ಮೂರು ದಿನಗಳ ಸಂಪೂರ್ಣ ಲಾಕ್ ಡೌನ್ ನಂತರ ರವಿವಾರದಿಂದ ಸೆಮಿ ಲಾಕ್‌ಡೌನ್ ಜಾರಿಗೆ ಬಂದಿದ್ದು, ಕೊರೊನಾ ಸೋಂಕು ಹರಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ ಎಚ್ಚರಿಕೆ ನೀಡಿದರು.
ಸೆಮಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿನಸಿ ಮತ್ತು ತರಕಾರಿ ಖರೀದಿಗೆ ಸಮಯ ಸಡಿಲಿಕೆ ಇದ್ದು, ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ಕಾಲಾವಕಾಶ ನೀಡಲಾಗಿದೆ. ಮೂರು ದಿನಗಳಿಂದ ಮನೆಯಲ್ಲೇ ಇದ್ದ ಜನರು, ರವಿವಾರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆಯೇ ಮನೆಗಳಿಂದ ಹೊರ ಬಂದರು. ಕಾರು, ಬೈಕ್, ಆಟೋ, ಖಾಸಗಿ ವಾಹನಗಳಲ್ಲಿ ಜನ ರಸ್ತೆಗಿಳಿಸಿದರು. ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದರು. ರಸ್ತೆಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು.
ಜತೆಗೆ ವಾಹನಗಳ ಸಂಚಾರ ದಟ್ಟಣೆ ಇತ್ತು. ಅಲ್ಲದೇ, ಬೆಳಗ್ಗೆ 10 ಗಂಟೆಯ ನಂತರವೂ ಕಾರು, ಬೈಕ್‌ಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬಂತು. ಹೀಗಾಗಿಯೇ ನೂತನ ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ ರಸ್ತೆಗಿಳಿದು ಜನ ಸಂಚಾರ ಮತ್ತು ವಾಹನ ಓಡಾಟ ನಿಯಂತ್ರಣಕ್ಕೆ ಮುಂದಾದರು. ನಗರದ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಸೆಮಿ ಲಾಕ್‌ಡೌನ್‌ಗೆ ಬಿಗಿ ಕ್ರಮ ಕೈಗೊಂಡರು.
ಬೈಕ್, ಕಾರುಗಳನ್ನು ತಡೆದು ನಿಲ್ಲಿಸಿ ವಿಚಾರಣೆ ಮಾಡಿದರು. ಸರ್ಕಾರ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿ ಉಲ್ಲಂಘಿಸಿ ಸಂಚರಿಸುತ್ತಿದ್ದ ಮತ್ತು ಸಕಾರಣವಿಲ್ಲದೇ ರಸ್ತೆಗೆ ಬಂದಿದ್ದ ವಾಹನಗಳನ್ನು ಜಪ್ತಿ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ಶನಿವಾರ ಮುಗಿದಿದೆ.
ರವಿವಾರದಿಂದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 10 ಗಂಟೆ ನಂತರ ಅನಗತ್ಯವಾಗಿ ಯಾರೂ ರಸ್ತೆಗಿಳಿಬಾರದು. ಪ್ರತಿಯೊಬ್ಬರು ಸರ್ಕಾರದ ನಿಯಮ ಪಾಲಿಸಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಆಯುಕ್ತರು ಹೇಳಿದರು.