ಕಲಬುರಗಿ: ಸೂರ್ಯನಗರಿ ಕಲಬುರಗಿ ಜನರ ಪೊಲೀಸ್ ಆಯುಕ್ತಾಲಯ (ಪೊಲೀಸ್ ಕಮಿಷನರೇಟ್) ಆರಂಭಿಸುವ ಬಹುದಿನಗಳ ಕನಸು ನನಸಾಗುವ ಹೊಸ್ತಿಲಲ್ಲಿದೆ. ಫೆ.23ರಿಂದ ಮಹಾನಗರದಲ್ಲಿ ಪೊಲೀಸ್ ಕಮೀಷನರೇಟ್ ಕಚೇರಿ ಕಾರ್ಯಾರಂಭಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನಗರದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿ (ಹಳೆ ಐಜಿಪಿ ಕಚೇರಿ)ಯಲ್ಲಿ ಕಮಿಷನರೇಟ್ ಕಚೇರಿಯನ್ನು ತಾತ್ಕಾಲಿಕವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. ಸುಮಾರು 39.56 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಕಚೇರಿ ಕಟ್ಟಡವನ್ನು ಸುಣ್ಣ-ಬಣ್ಣದಿಂದ ಅಂದಗೊಳಿಸಲಾಗುತ್ತಿದೆ.
ನಗರದಲ್ಲಿ ಹೆಚ್ಚಾಗಿರುವ ಪುಡಿ ರೌಡಿಗಳ ಹಾವಳಿ ಮಟ್ಟಹಾಕಲು ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಆಯುಕ್ತರ ಕಚೇರಿ ಆರಂಭಿಸುವುದು ಅತ್ಯಂತ ಅಗತ್ಯವಾಗಿದೆ ಎಂಬ ಬಹುದಿನಗಳ ಬೇಡಿಕೆಯಾಗಿತ್ತು. ಅಲ್ಲದೇ, ಮಾಜಿ ಸಿಎಂ ದಿ|ಧರ್ಮಸಿಂಗ್, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಪೊಲೀಸ್ ಆಯುಕ್ತರ ಕಚೇರಿ ಸ್ಥಾಪಿಸುವ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.
2014ರಲ್ಲಿ ಕಲಬುರಗಿಯಲ್ಲಿ ನಡೆದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಪೊಲೀಸ್ ಆಯುಕ್ತಾಲಯ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ತದನಂತರ 2017-18ನೇ ಸಾಲಿನ ರಾಜ್ಯ ಬಜೆಟ್‌ನಲ್ಲೂ ಕಲಬುರಗಿ ಪೊಲೀಸ್ ಆಯುಕ್ತಾಲಯ
ಘೋಷಿಸಲಾಗಿತ್ತು. ಕಳೆದ ಅಕ್ಟೋಬರ್ 25ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕಲಬುರಗಿ ಪೊಲೀಸ್ ಆಯುಕ್ತಾಲಯ ಪ್ರಾರಂಭಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ ಈಶಾನ್ಯ ವಲಯದ ಐಜಿಪಿ ಅವರಿಗೆ ಪತ್ರ ಬರೆದು ಪೊಲೀಸ್ ಆಯುಕ್ತಾಲಯ ಆರಂಭಕ್ಕೆ ಬೇಕಾದ ಕಚೇರಿ, ಸಿಬ್ಬಂದಿ ಹಾಗೂ ವಾಹನಗಳ ವ್ಯವಸ್ಥೆಗಳು ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಹೀಗಾಗಿಯೇ ಕಲಬುರಗಿ ಜನರ ಪಾಲಿಗೆ ಪೊಲೀಸ್ ಆಯುಕ್ತಾಲಯ ಆರಂಭ ಶೀಘ್ರವಾಗಬಹುದು ಎಂಬ ನಿರೀಕ್ಷೆಯಿತ್ತು, ಕೊನೆಗೂ ಆ ಗಳಿಗೆ ಕೂಡಿಬಂದಿದ್ದು, ಫೆ.23ರಂದು ಗೃಹ ಖಾತೆ ಸಚಿವ ಎಂ.ಬಿ.ಪಾಟೀಲ ಅವರು ಪೊಲೀಸ್ ಆಯುಕ್ತಾಲಯ ಕಚೇರಿ ಉದ್ಘಾಟಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಈಗಾಗಲೇ ಪೊಲೀಸ್ ಆಯುಕ್ತಾಲಯ ಉದ್ಘಾಟನಾ ಸಮಾರಂಭಕ್ಕೆ ಪೊಲೀಸ್ ಅಧಿಕಾರಿಗಳು ಸಹ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಷ್ಟರೊಳಗೆ ನೂತನ ಪೊಲೀಸ್ ಆಯುಕ್ತರ ನೇಮಕವಾಗುವ ಸಾಧ್ಯತೆ ಇದೆ. ಹೊಸ ಆಯುಕ್ತರ ನೇಮಕದವರೆಗೆ ಈಶಾನ್ಯ ವಲಯದ ಐಜಿಪಿ ಮನೀಷ್ ಖಬೇಕರ್ ಅವರೇ ಪ್ರಭಾರಿ ಆಯುಕ್ತರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.