Advertisement

ಹೊಸ ಪೊಲೀಸ್‌ ಬೀಟ್‌ ಪದ್ಧತಿಗೆ ರಾಜ್ಯವೇ ಮಾದರಿ

12:34 PM Jul 13, 2018 | |

ಪಡುಬಿದ್ರಿ: ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿ ಜಾರಿಗೆ ತಂದ ಹೊಸ ಬೀಟ್‌ ಪದ್ಧತಿ ಇದೀಗ ಕೇಂದ್ರ ಸರಕಾರದ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ದೇಶಾದ್ಯಂತ ಅದನ್ನು ಅನುಸರಿಸಲು ಯೋಜನೆ ರೂಪಿಸಿದೆ. ನಾಗರಿಕ ಕೇಂದ್ರಿತ ವ್ಯವಸ್ಥೆ ಹೊಸ ಬೀಟ್‌ ಪದ್ಧತಿಯನ್ನು ಬೆಳಗಾವಿಯಲ್ಲಿ ಆಗ ಎಸ್‌ಪಿಯಾಗಿದ್ದ ರವಿಕಾಂತೇಗೌಡರು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು ಫ‌ಲಕೊಟ್ಟಿತ್ತು. ಈ ಕುರಿತ ವರದಿ ರಾಜ್ಯ ಪೊಲೀಸ್‌ ಇಲಾಖೆಗೆ ರವಾನಿಸಲಾಗಿತ್ತು. ಅದರಂತೆ ಗೃಹ ಇಲಾಖೆ ವಿಮರ್ಶೆ ನಡೆಸಿ ರಾಜ್ಯದಲ್ಲಿ ಸಮಗ್ರವಾಗಿ ಜಾರಿಗೆ ಒಪ್ಪಿತ್ತು. 2017ರ ಎ.1ರಿಂದ ಈ ಪದ್ಧತಿ ಅನುಷ್ಠಾನಕ್ಕೆ ಬಂದಿದೆ. ನಾಗರಿಕ ಕೇಂದ್ರಿತ ಪೊಲೀಸಿಂಗ್‌ (ಸಿಟಿಜನ್‌ ಸೆಂಟ್ರಿಕ್‌ ಪೊಲೀಸಿಂಗ್‌) ವ್ಯವಸ್ಥೆ ಇದಾಗಿದ್ದು ಸಾಕಷ್ಟು ಅನುದಾನ ಸಿಕ್ಕರೆ ಉತ್ತಮವಾಗಿ ಯೋಜನೆ ಜಾರಿಗೊಳಿಸಬಹುದಾಗಿದೆ.  

Advertisement

ವರದಿ ಪಡೆದ ಕೇಂದ್ರ
ಕೇಂದ್ರ ಗೃಹ ಇಲಾಖೆಯು ರಾಜ್ಯ ಗೃಹ ಇಲಾಖೆಯಿಂದ ಈ ಹೊಸ ಬೀಟ್‌ ಪದ್ಧತಿಯ ಬಗ್ಗೆ ವರದಿಯನ್ನು ತರಿಸಿ ಕೊಂಡು ಪರಿಶೀಲಿಸಿದೆ. ಸದಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದೆ. 

ಬೀಟ್‌ ಹಿಂದೆಯೂ ಇತ್ತು
ಬೀಟ್‌ ಪದ್ಧತಿ ಹಿಂದೆಯೂ ಪೊಲೀಸ್‌ ಇಲಾಖೆಯಲ್ಲಿ ಜಾರಿಯಲ್ಲಿತ್ತು. ಆದರೆ ವ್ಯವಸ್ಥಿತವಾಗಿರಲಿಲ್ಲ. ಆದರೀಗ ಸಾರ್ವಜನಿಕರೇ ಇದರಲ್ಲಿ ಭಾಗಿಯಾಗುವುದರಿಂದ ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿಸಿದೆ.  ನಕಾರಾತ್ಮಕ ಅಂಶಗಳೂ ಇವೆ. ಬೀಟ್‌ ಸದಸ್ಯರಿಗೆ ಹಂಚಲಾದ ಗುರುತಿನ ಚೀಟಿ ದುರ್ಬಳಕೆ ಆಗುತ್ತಿರುವುದು ಕಂಡು ಬಂದಿದೆ. ಟೋಲ್‌ ಗೇಟ್‌ಗಳಲ್ಲಿ ಬಳಸಿಕೊಳ್ಳುವುದು ಟ್ರಾಫಿಕ್‌ ನಿಯಮ ಉಲ್ಲಂಘನೆ ಸಂದರ್ಭ ಪಾರಾಗಲು ಉಪಯೋಗಿ ಸುವುದು ಗೊತ್ತಾಗಿದೆ. ಕೆಲವೆಡೆ ಸದಸ್ಯರಿಗೆ ಇನ್ನೂ ಗುರುತಿನ ಚೀಟಿ ದೊರಕಿಲ್ಲ. ಆದರೂ ಬೀಟ್‌ ಸಮಿತಿಯ ಮೂಲಕ ಮಾಹಿತಿ ಸಂಗ್ರಹ ಚಾಲ್ತಿಯಲ್ಲಿದೆ. 

ಹೇಗಿದೆ ನೂತನ ಪೊಲೀಸ್‌ ಬೀಟ್‌?
ಹೊಸ ವ್ಯವಸ್ಥೆಯಲ್ಲಿ ಒಂದು ವಾರ್ಡ್‌ ಸುಮಾರು 6-8 ಜನರಂತೆ ಅಂದರೆ ಒಂದು ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 50 ಮಂದಿ ಸಾರ್ವಜನಿಕರನ್ನು ಬೀಟ್‌ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಬೀಟ್‌ ಜನರ ಸಂಪೂರ್ಣ ಮಾಹಿತಿ ಠಾಣೆಯಲ್ಲಿದ್ದು, ಬೀಟ್‌ ಪ್ರದೇಶಕ್ಕೆ ಪೊಲೀಸರೊಬ್ಬರನ್ನು ಮುಖ್ಯಸ್ಥ ರನ್ನಾಗಿ ನೇಮಿಸಲಾಗುತ್ತದೆ. ಘಟನೆಗಳು ಸಂಭವಿಸಿದಾಗ ಬೀಟ್‌ ಮುಖ್ಯಸ್ಥರಿಗೆ ಸಂಬಂಧ ಪಟ್ಟ ಬೀಟ್‌ ವ್ಯಕ್ತಿ ತತ್‌ಕ್ಷಣ ಮಾಹಿತಿ ನೀಡುತ್ತಾರೆ.

ಪಡುಬಿದ್ರಿಯಲ್ಲಿ  1085 ಸದಸ್ಯರು 
ಪಡುಬಿದ್ರಿ ಪೊಲೀಸ್‌ ಠಾಣೆಯೊಂದರಲ್ಲೇ 31ಪೊಲೀಸ್‌ ಸಿಬಂದಿಗೆ 10 ಗ್ರಾಮಗಳ ಬೀಟ್‌ ಹಂಚಲಾಗಿದೆ. 2-3 ವಾರ್ಡ್‌ ವ್ಯಾಪ್ತಿಯಲ್ಲಿ 35 ನಾಗರಿಕರು ಓರ್ವ ಪೊಲೀಸ್‌ಗೆ ನೆರವಾಗುತ್ತಾರೆ. ಹೀಗೆ ಪಡುಬಿದ್ರಿ ಠಾಣಾ ವ್ಯಾಪ್ತಿಯೊಂದರಲ್ಲೇ 1,085 ಮಂದಿ ಬೀಟ್‌ ಸದಸ್ಯರಿದ್ದಾರೆ. 

Advertisement

ಜನ ಸಮುದಾಯ ವನ್ನು ಪೊಲೀಸರ ಜತೆ ಸೇರಿಸಿ ಕೊಳ್ಳಲು ಮತ್ತು ಪೊಲೀಸ್‌ ಸಶಕ್ತೀಕರಣಕ್ಕೆ ಅನುಕೂಲವಾಗುವಂತೆ 2015ರಲ್ಲಿ ಕಿತ್ತೂರು ಠಾಣೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಬಳಿಕ 2016ರಲ್ಲಿ ಬೆಳಗಾವಿ ಜಿಲ್ಲೆಗೆ ಜಾರಿ ಮಾಡಲಾಗಿತ್ತು. ಮುಂದೆ ರಾಜ್ಯದಲ್ಲಿ ಅಳವಡಿಸಲಾಯಿತು. 2017ರಲ್ಲಿ ದಿಲ್ಲಿಗೆ ತೆರಳಿ ಬಿಪಿಆರ್‌ಆ್ಯಂಡ್‌ಡಿ  (ಬ್ಯೂರೋ ಆಫ್‌ ಪೊಲೀಸ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ವಿಂಗ್‌)ಯಲ್ಲಿ ಈ ಬಗ್ಗೆ ವಿವರ ನೀಡಿದ್ದೆ. ಈಗ ಕೇಂದ್ರ ದೇಶದೆಲ್ಲೆಡೆ ಮಾದರಿ ಯೋಜನೆಯಾಗಿ ಜಾರಿಗೆ ಸೂಚಿಸಿದೆ.  
– ಡಾ| ಬಿ.ಆರ್‌. ರವಿಕಾಂತೇ ಗೌಡ
ದ.ಕ. ಜಿಲ್ಲಾ ಎಸ್‌ಪಿ 

*ಆರಾಮ

Advertisement

Udayavani is now on Telegram. Click here to join our channel and stay updated with the latest news.

Next