ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೋವಿಡ್ ಪ್ರಕರಣಗಳು ಬರುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆಯ ಬೀಟ್ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ಹಳ್ಳಿಗಳಲ್ಲಿ ನಿರಂತರ ಪರಿಶೀಲನೆ ಜೊತೆಗೆ ಗ್ರಾಪಂ ಮಟ್ಟದ ಕಾರ್ಯಪಡೆಗಳಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದ್ದಾರೆ.
ಸೋಮವಾರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿ ಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರನ್ನು ಒಳಗೊಂಡ ಕಾರ್ಯ ಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೂಕ್ತ ರೀತಿಯಲ್ಲಿ ನೆರವಾಗುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟ ತಕ್ಷಣ ಕೋವಿಡ್ ಕೇರ್ ಸೆಂಟರ್‌ಗೆ ರೋಗಿಗಳು ನಿರಾಕರಿಸುವ ಪ್ರಕರಣಗಳು ಸಹ ನಡೆಯುತ್ತಿವೆ.
ಇಂತಹ ಪ್ರಕರಣಗಳ ಬಗ್ಗೆ ವಿಶೇಷ ಗಮನ ನೀಡಿ ಕಾರ್ಯ ಪಡೆಗಳಿಗೆ ಸ್ಪಂದಿಸಬೇಕು. ಪ್ರತಿ ಗ್ರಾಮದಲ್ಲಿ ಬೀಟ್ ಸಿಬ್ಬಂದಿ ನಿರಂತರ ಭೇಟಿ ನೀಡುವ ಮೂಲಕ ಕಾರ್ಯ ಪಡೆಗಳೊಂದಿಗೆ ಸಮನ್ವಯತೆ ಸಾ ಧಿಸುವಂತೆ ನಿರ್ದೇಶನ ನೀಡಿದರು. ಕೋವಿಡ್ ರೋಗಿಗಳು ಗ್ರಾಮೀಣ ಪ್ರದೇಶದಲ್ಲಿ ನಿರಾತಂಕ ಓಡಾಡುವುದರಿಂದ ಕೊರೊನಾ ಪ್ರಕರಣ ಹೆಚ್ಚುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ಕೋವಿಡ್ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಗಮನ ನೀಡುವಂತೆ ಸೂಚಿಸಿದರು. ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಾಗಿದ್ದು, ಸರಕಾರದ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿ ಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಘಟಿತ ಪ್ರಯತ್ನದ ಮೂಲಕ ಕೋವಿಡ್ ಹತೋಟಿಗೆ ತರಬೇಕಿದೆ. ಪೊಲೀಸ್ ಅ ಧಿಕಾರಿಗಳು ಮತ್ತು ಸಿಬ್ಬಂದಿ, ತಮ್ಮ ಜೀವದ ಹಂಗು ತೊರೆದು ಅತ್ಯುತ್ತಮ ಸೇವೆ ಸಲ್ಲಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯ ಓಡಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ಹೊರತಾಗಿಯೂ ಜನರು ಅನಗತ್ಯವಾಗಿ ಬೀದಿಗೆ ಇಳಿದಲ್ಲಿ ಕಠಿಣ ಕ್ರಮ ಕೈಗೊಳ್ಳಿ. ಆದರೆ ಇದರ ಜತೆಗೆ ರೈತರ ಕೃಷಿ ಕಾರ್ಯಕ್ಕೆ ತೊಂದರೆ ಕೊಡಬಾರದು. ಅಗತ್ಯ ಹಾಗೂ ತುರ್ತು ಕೆಲಸಕ್ಕೆ ಹೊರಗೆ ಬಂದವರ ವಿಷಯದಲ್ಲಿ ಮಾನವೀಯತೆ ತೋರಬೇಕು. ತಳ್ಳುವ ಗಾಡಿ ವ್ಯಾಪಾರಸ್ಥರ ಬಗ್ಗೆಯೂ ಮಾನವೀಯತೆ ನೆಲೆಯ ಮೇಲೆ ನೋಡಿಕೊಳ್ಳುವಂತೆ ಸೂಚಿಸಿದರು. ವಿಜಯಪುರ ನಗರದ ಇಟಗಿ ಕ್ರಾಸ್ ಬಗ್ಗೆ ನಿಗಾ ಇಡಬೇಕು. ಸಿಂದಗಿ ಹಾಗೂ ಆಲಮೆಲ ಭಾಗಗಳಲ್ಲಿ ಪೊಲೀಸ್ ಅ ಧಿಕಾರಿ, ಸಿಬ್ಬಂದಿ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕು. ಅನ ಧಿಕೃತ ಮರಳು ಸಾಗಾಣಿಕೆ ಬಗ್ಗೆ ತೀವ್ರ ನಿಗಾ ಇಡುವಂತೆಯೂ ಸಲಹೆ ನೀಡಿದರು. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.