Advertisement

“ಬೀಫ್ ಫೆಸ್ಟ್‌’ಆಚರಣೆಗೆ ಪೊಲೀಸರಿಂದ ತ‌ಡೆ

10:52 AM May 30, 2017 | Team Udayavani |

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಗೋ ಹತ್ಯೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿರುವ
ಸಂಘಟನೆಯೊಂದು ನಗರದ ಪುರಭವನ ಮುಂಭಾಗ ಸೋಮವಾರ ಸಂಜೆ “ಬೀಫ್ ಫೆಸ್ಟ್‌’ಗೆ ಕರೆ ನೀಡಿತ್ತಾದರೂ
ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಮೂವ್‌ಮೆಂಟ್‌ ಬೆಂಗಳೂರು ಹೆಸರಿನ ಸಂಘಟನೆಯು ಸಾಮಾಜಿಕ ಜಾಲ
ತಾಣಗಳಲ್ಲಿ “ಬೀಫ್ ಫೆಸ್ಟ್‌’ (ಸಾರ್ವಜನಿಕವಾಗಿ ಗೋಮಾಂಸ ಸೇವನೆ ಉತ್ಸವ) ಮಾಡುವುದಾಗಿ ಹೇಳಿಕೊಂಡು
ಪುರಭವನ ಮುಂಭಾಗ ಸಂಜೆ 5 ಗಂಟೆಗೆ ಸಮಯ ನಿಗದಿಪಡಿಸಿತ್ತು. ಆದರೆ, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು
ಕೇಂದ್ರ ವಲಯ ಡಿಸಿಪಿ ಚಂದ್ರಗುಪ್ತ ಈ ಬಗ್ಗೆ ಸ್ಪಷ್ಟನೆ ನೀಡಿದರು. ಈ ಮಧ್ಯೆ, ಎಸ್‌ಎಫ್ಐ ಸೇರಿ ಕೆಲ ಸಂಘಟನೆಗಳು
ಪುರಭವನ ಮುಂಭಾಗ ಗೋಹತ್ಯೆ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿದವು. ಆದರೆ, ಇದೇ ಸಂದರ್ಭದಲ್ಲಿ ಅಲ್ಲಿಗೆ
ಆಗಮಿಸಿದ ಗೋ ರಕ್ಷಕ ಸಮಿತಿ, ಹಿಂದೂ ಜಾಗರಣ ಸಮಿತಿ ಸದಸ್ಯರು ಗೋ ಹತ್ಯೆ ನಿಷೇಧ ಪರ ಜೈಕಾರ ಹಾಕಿದರು. ಈ ವೇಳೆ ಪರ-ವಿರೋಧ ಪ್ರತಿಭಟನೆ ಮಾಡಲು ಬಂದವರ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಗೋ ಹತ್ಯೆ ನಿಷೇಧ ಕಾಯ್ದೆ: ಪುನರ್‌ ಪರಿಶೀಲಿಸಲಿ
ಮೈಸೂರು: ಗೋವು ಮಾರಾಟ ಮತ್ತು ಖರೀದಿ ನಿಷೇಧಿಸಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪುನರ್‌
ಪರಿಶೀ ಲಿಸಲಿ ಎಂದು ಲೋಕೋಪ ಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆಗ್ರಹಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಜನರ ಭಾವನೆಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಭಾವನಾತ್ಮಕ ವಿಷಯವನ್ನು ಕೆದಕಿ ಸಂವಿಧಾನ ಬದ್ಧ ಆಹಾರದ ಹಕ್ಕನ್ನು ಕಸಿಯುವ ಮೂಲಕಪ್ರಜಾತಂತ್ರ ವಿರೋಧಿಯಾಗಿ ವರ್ತಿಸುತ್ತಿದೆ. 1964 ರ ಗೋಹತ್ಯೆ ನಿಷಿದ್ಧ ಕಾಯ್ದೆಯಲ್ಲೇ ವಯಸ್ಸಾದ ಮತ್ತು ಕೆಲಸಕ್ಕೆ ಬಾರದ ಗೋವನ್ನು ಮಾರಲು ಅವಕಾಶವಿದೆ. ಆದರೆ ಬಿಜೆಪಿ ಏಕೆ ಇದನ್ನು ಪದೇಪದೆ ಪ್ರಸ್ತಾಪಿಸುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯ ಮುಖಂಡರು ಬಹಳಷ್ಟು ಮಂದಿ ಹೊಲ ಉತ್ತಿಲ್ಲ, ಸಗಣಿ ಬಳಿದಿಲ್ಲ, ಕಳೆಯನ್ನೂ ಕಿತ್ತಿಲ್ಲ, ಎಮ್ಮೆ, ಕರು, ಹಸುವನ್ನು ತೊಳೆದಿಲ್ಲ. ಇಂತ ವರು ಗೋ ಹತ್ಯೆ ನಿಷೇಧ ಕಾಯ್ದೆ ಕುರಿತುಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವ ಎ.ಮಂಜು ಪದಚ್ಯುತಿಗೆ ಬಿಜೆಪಿ ಆಗ್ರಹ
ಬೆಂಗಳೂರು: ಗೋಸಂರಕ್ಷಣೆ ಸಲುವಾಗಿ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮತ್ತು ಖರೀದಿಗೆ
ನಿಷೇಧ ಹೇರುವ ಆದೇಶಕ್ಕೆ ಸಹಿ ಮಾಡಿದ್ದರಿಂದ ಶಾಪಕ್ಕೊಳಗಾಗಿ ಕೇಂದ್ರ ಪರಿಸರ ಖಾತೆ ಸಚಿವರಾಗಿದ್ದ ಅನಿಲ್‌ ಮಾಧವ ದವೆ ಸಾವಿಗೀಡಾದರು ಎಂದು ರಾಜ್ಯ ಪಶುಸಂಗೋಪನಾ ಸಚಿವ ಎ. ಮಂಜು ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಬಿಜೆಪಿ, ಸಚಿವ ಮಂಜು ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ
ವಕ್ತಾರರಾದ ಶಾಸಕ ಎಸ್‌.ಸುರೇಶ್‌ಕುಮಾರ್‌, ಕೇಂದ್ರ ಸಚಿವರೊಬ್ಬರ ಸಾವಿನ ಕುರಿತಂತೆ ಇಂತಹ ಅವಮಾನಕಾರಿ
ಮತ್ತು ಕ್ಷುಲ್ಲಕ ಹೇಳಿಕೆ ನೀಡಿರುವ ಮಂಜು ಸಚಿವ ಸ್ಥಾನಕ್ಕೆ ಲಾಯಕ್ಕಾದವರಲ್ಲ. ಅವರನ್ನು ಕೂಡಲೇ ಸಂಪುಟದಿಂದ
ಕೈಬಿಡಬೇಕು ಎಂದು ಒತ್ತಾಯಿಸಿದರು.

2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದಾಗ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಸಚಿವ ಟಿ.ಜಾನ್‌ ಅವರು, ಏಸುಕ್ರಿಸ್ತನ ಶಾಪದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಾನ್‌ ಅವರನ್ನು ಎಸ್‌.ಎಂ.ಕೃಷ್ಣ ಕೈಬಿಟ್ಟಿದ್ದರು. ಅದೇ ರೀತಿ ಸಾವಿನ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವ ಕಾಂಗ್ರೆಸ್‌ನ ಮಾಜಿ ಸಚಿವರ ಚಾಳಿಯನ್ನು ಹಾಲಿ ಸಚಿವರು ಮುಂದುವರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್‌, ಸಹ ವಕ್ತಾರ ಎಸ್‌. ಪ್ರಕಾಶ್‌, ಮಾಧ್ಯಮ ಪ್ರಮುಖ್‌ ಎಸ್‌. ಶಾಂತಾರಾಮ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next