ಹನೂರು (ಚಾಮರಾಜನಗರ): ಗಾಂಜಾ ಸಂಗ್ರಹಣೆ ಮಾಡಿದ್ದಾನೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಲು ತೆರಳಿದ ಪೊಲೀಸರಿಗೆ ಆರೋಪಿಯ ಬಳಿ ಗಾಂಜಾದ ಜೊತೆ ಗಂಧದ ತುಂಡುಗಳೂ ಲಭಿಸಿರುವ ವಿಚಿತ್ರ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಡಿಯಂಚಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಜಲ್ಲಿಪಾಳ್ಯ ಗ್ರಾಮದ ಚಿನ್ನಪ್ಪಯ್ಯಗೌಂಡರ್ (55) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಅಕ್ರಮವಾಗಿ ಗಾಂಜಾ ಸಂಗ್ರಹಣೆ ಮಾಡಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗ ಡಿವೈಎಸ್ಪಿ ನಾಗರಾಜು ಮಾರ್ಗದರ್ಶನದಲ್ಲಿ ಸಿಪಿಐ ಮನೋಜ್‍ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಪೊಲೀಸರು ಚಿನ್ನಪ್ಪಯ್ಯಗೌಂಡರ್ ಗಾಂಜಾ ಸೊಪ್ಪಿನ ಜೊತೆ ಶ್ರೀಗಂಧದ ತುಂಡುಗಳನ್ನೂ ಸಂಗ್ರಹಿಸಿದ್ದುದನ್ನು ಪತ್ತೆಹಚ್ಚಿದ್ದಾರೆ.
ಈ ವೇಳೆ ಬಂಧಿತನಿಂದ 550ಗ್ರಾಂ ಒಣ ಗಾಂಜಾ ಮತ್ತು 55 ಕೆ.ಜಿಯಷ್ಟು ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಪಿಎಸ್‍ಐ ಮಂಜುನಾಥ್‍ಪ್ರಸಾದ್, ಎಎಸ್‍ಐ ಸಿದ್ದಪ್ಪ, ಮುಖ್ಯ ಪೇದೆಗಳಾದ ನಂಜುಂಡ, ಶಿವಮೂರ್ತಿ, ಶಿವರಾಜು ನಾಗೇಂದ್ರ, ಪೇದೆಗಳಾದ ಅಣ್ಣಾ ದೊರೈ, ಬೊಮ್ಮೇಗೌಡ, ರಘು, ಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.