ಬೆಂಗಳೂರು: ಅಂತರ್ಜಾಲಗಳ ಮೂಲಕ ಕಾಲ್ ಗರ್ಲ್ಗಳ ಬಗ್ಗೆ ಜಾಹೀರಾತು ನೀಡಿ ಯುವಕರಿಂದ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರ ನಿವಾಸಿಗಳಾದ ಶಿವು ಮತ್ತು ಯೇಸುದಾಸ್ ಬಂಧಿತರು. ಮತ್ತೂಬ್ಬ ಆರೋಪಿ ಅಜಯ್ ತಲೆಮರೆಸಿಕೊಂಡಿದ್ದು, ಹುಟುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಾಲ್‌ಗರ್ಲ್ಗಳನ್ನು ಒದಗಿಸುವುದಾಗಿ ಅಂತರ್ಜಾಲದಲ್ಲಿ ಆಕರ್ಷಕ ಜಾಹೀರಾತು ನೀಡುತ್ತಿದ್ದರು. ಇಂದಿರಾನಗರ ಮತ್ತು ಹಲಸೂರು ಭಾಗಗಳಲ್ಲಿ ವಿವಿಧ ಭಾಷೆಯ, ಪ್ರದೇಶಗಳ ಯುವತಿಯರು ತಮ್ಮ ಜತೆ ಸಮಯ ಕಳೆಯಲ್ಲಿದ್ದಾರೆ ಎಂದು ಜಾಹೀರಾತು ಪ್ರಕಟಿಸುತ್ತಿದ್ದರು.
ಇದನ್ನು ನಂಬಿದ ಯುವಕನೊಬ್ಬ ಜಾಹೀರಾತಿನಲ್ಲಿ ಇದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ. ಇತ್ತ ಕರೆ ಸ್ವೀಕರಿಸಿದ ಯೇಸುದಾಸ್, ತ್ರೀಡಿ ಜಂಕ್ಷನ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಬರುವಂತೆ ಯುವಕನಿಗೆ ಹೇಳಿದ್ದ. ಅದರಂಥೆ ಸ್ಥಳಕ್ಕೆ ಬಂದು ಅಪಾರ್ಟ್‌ಮೆಂಟ್ ಒಳಗೆ ಹೋಗುತ್ತಿದ್ದ ಯುವಕನನ್ನು ನೆಲ ಮಹಡಿಯಲ್ಲೇ ತಡೆದ ಇಬ್ಬರು ಆರೋಪಿಗಳು, ಅಲ್ಲೇ ಹಣ ನೀಡುವಂತೆ ತಿಳಿಸಿದ್ದರು.
ಅದರಂತೆ ಹಣ ನೀಡಿ ಆತ ಮೇಲೆ ಹೋದಾಗ ಅಲ್ಲಿ ಯಾವುದೇ ಕಚೇರಿಯಾಗಲಿ, ಯುವತಿಯಾಗಲಿ ಇರಲಿಲ್ಲ. ಯುವಕ ಕೆಳಗೆ ಬರುವಷ್ಟರಲ್ಲಿ ಇಬ್ಬರೂ ನಾಪತ್ತೆಯಾಗಿದ್ದರು. ಬಳಿಕ ಯುವಕ ಠಾಣೆಗೆ ಬಂದು ದೂರು ನೀಡಿದ್ದ ಎಂದು ಇಂದಿರಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹಣ ಸುಲಿಯುವ ಆ್ಯಪ್‌ಗ್ಳು: ಅಂತರ್ಜಾಲ ಮಾತ್ರವಲ್ಲದೇ “ಕ್ಲಬ್ ಫೋರ್’, “ಜಸ್ಟ್‌ಫನ್’, “ನಿಯರ್ ಬೈ’ ಸೇರಿದಂತೆ ನಾನಾ ಹೆಸರಿನ ಆ್ಯಪ್‌ಗ್ಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಈ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಯುವಕರು ಅದರಲ್ಲಿನ ಬೆತ್ತಲೆ ಮತ್ತು ಅರೆಬೆತ್ತಲೆ ಫೋಟೋಗಳನ್ನು ನೋಡಿ ಆಕರ್ಷಿತರಾಗುತ್ತಾರೆ. ಆ ನಂತರ ವಾಯ್ಸ ಚಾಟ್, ವೀಡಿಯೋ ಚಾಟ್, ಟೆಕ್ಸ್ಟ್ ಚಾಟ್ ಇನ್ನಿತರೆ ಹೆಸರಿನಲ್ಲಿ ಮುಂಗಡ ಹಣ ಕೀಳುವ ತಂಡ, ಯುವಕರನ್ನು ವಂಚಿಸುತ್ತಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.