ಹುಬ್ಬಳ್ಳಿ: ಕಡಿಮೆ ಬೆಲೆಗೆ ಬಂಗಾರ ಕೊಡುತ್ತೇವೆಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ 5.50 ಲಕ್ಷ ರೂ. ಇದ್ದ ಬ್ಯಾಗ್ ದೋಚಿ ತಲೆಮರೆಸಿಕೊಂಡಿದ್ದ ಆರು ಜನ ದರೋಡೆಕೋರರ ತಂಡವನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ದಾಸನಕೊಪ್ಪ ಗ್ರಾಮದ ಪ್ರಶಾಂತ ಎನ್. ಕೊರಚರ, ಪ್ರವೀಣ ಎನ್. ಕೊರಚರ, ಅನಿಲ ಎಸ್. ಕೊರಚರ, ಪರಮೇಶ ಕೆ. ಕೊರಚರ, ಅರುಣ ಬಿ. ಕೊರಚರ ಹಾಗೂ ಹರಪನಹಳ್ಳಿ ತಾಲೂಕು ಯಲ್ಲಾಪುರ ಗ್ರಾಮದ ಮಾರುತಿ ಕೆ.ಎಸ್. ಬಂಧಿತರಾಗಿದ್ದಾರೆ.
ವರೂರಿನ ಖಾಸಗಿ ಸಂಸ್ಥೆಯ ವರ್ಕ್ ಶಾಪ್ ಬಳಿ ಸಂಶಯಾಸ್ಪದವಾಗಿ ಕಾರು ಮತ್ತು ಬೈಕ್‌ನಲ್ಲಿ ತಿರುಗಾಡುತ್ತಿದ್ದ ಆರು ಜನರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಫೆಬ್ರವರಿಯಲ್ಲಿ 5.50ಲಕ್ಷ ರೂ. ದರೋಡೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ ಒಂದು ಕಾರು, ಬೈಕ್, ಬಂಗಾರ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಬಂಧಿತರು ತಾಲೂಕಿನ ತಾರಿಹಾಳದಲ್ಲಿ ಚನ್ನಪಟ್ಟಣ ತಾಲೂಕು ಹೊಂಗನೂರು ಗ್ರಾಮದ ಸುರೇಶ ಟಿ. ವೆಂಕಟಪ್ಪ ಅವರನ್ನು ಪರಿಚಯಿಸಿಕೊಂಡು, ಅಜ್ಜನೊಬ್ಬನಿಗೆ ಬಂಗಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಒಂದು ತುಂಡನ್ನು ಕೊಟ್ಟು ನಂಬಿಸಿದ್ದಾರೆ. ನಂತರ 5.50 ಲಕ್ಷ ರೂ.ಗೆ ಅರ್ಧ ಕೆಜಿ ಚಿನ್ನ ಕೊಡುತ್ತೇವೆ. ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಆಗ ಸುರೇಶ ಮತ್ತು ಆತನ ಗೆಳೆಯ ವಿಜಯಭಾಸ್ಕರ ಫೆ. 27ರಂದು ಬೆಳಗ್ಗೆ ಹಣ ತೆಗೆದುಕೊಂಡು ಬಂದಾಗ, ಅವರನ್ನು ತಾರಿಹಾಳದ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಇಬ್ಬರನ್ನು ಕಟ್ಟಿಗೆಯಿಂದ ಹೊಡೆದು 5.50 ಲಕ್ಷ ರೂ. ಇದ್ದ ಬ್ಯಾಗ್ ಕಸಿದುಕೊಂಡಿದ್ದಾರೆ. ಅಲ್ಲದೆ ವಿಜಯಭಾಸ್ಕರನ ಕಿಸೆಯಲ್ಲಿದ್ದ 4 ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಅದನ್ನು ಹಾನಿಪಡಿಸಿ ಸಿಮ್ ತೆಗೆದುಕೊಂಡು ಪರಾರಿಯಾಗಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ವರ್ತಿಕಾ ಕಟಿಯಾರ ಅವರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದರು. ಡಿಎಸ್‌ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರಮೇಶ ಗೋಕಾಕ, ಪಿಎಸ್ ಐಗಳಾದ ಮಂಜುಳಾ ಸದಾರಿ, ಡಿ. ಚಾಮುಂಡೇಶ್ವರಿ, ಪ್ರೊ| ನರಸಿಂಹರಾಜು, ಎಎಸ್‌ಐ ಬಿ.ಎಸ್. ಹುಬ್ಬಳ್ಳಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.