ಬೆಂಗಳೂರು : ಪೊಲೀಸರು ಮೂವರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದು, ಅವರಿಂದ 80 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಎಂಡಿಎಂಎ, ಕೊಕೇನ್, ಹಶಿಶ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಗಣ್ಯ ಗ್ರಾಹಕರಿಗೆ ವಿತರಿಸಲು ಮತ್ತು ಮಾರಾಟ ಮಾಡಲು ಮಾದಕವಸ್ತುಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ನಗರದಲ್ಲಿ ಮಾದಕ ವ್ಯಸನಿಗಳ ಶಂಕಿತ ಚಟುವಟಿಕೆಗಳ ಮೇಲೆ ಸಿಸಿಬಿ ನಾರ್ಕೋಟಿಕ್ಸ್ ವಿಭಾಗ ನಿಗಾ ಇರಿಸಿದ್ದರು. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯನ್ನರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ, ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಬಂಧಿತ ಆರೋಪಿಗಳು ಮುಂಬೈನಿಂದ ದುಬಾರಿ ಬೆಲೆಯ ಸೋಪ್ ಬಾಕ್ಸ್ ಗಳಲ್ಲಿ ಡ್ರಗ್ಸ್ ತಂದು ತಮ್ಮ ನಿವಾಸದಲ್ಲಿ ಇಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಪೊಲೀಸರ ದಾಳಿ ವೇಳೆ 5 ಸೋಪ್ ಬಾಕ್ಸ್ ಗಳಲ್ಲಿ ಬಚ್ಚಿಟ್ಟಿದ್ದ 400 ಗ್ರಾಂ ಎಂಡಿಎಂಎ, 40 ಗ್ರಾಂ ಕೊಕೇನ್, 400 ಗ್ರಾಂ ಹಸಿಶ್ ವಶಪಡಿಸಿಕೊಂಡಿದ್ದಾರೆ. ಗ್ರಾಹಕರನ್ನು ಸಂಪರ್ಕಿಸಲು ಬಳಸುತ್ತಿದ್ದ ಉಪಕರಣಗಳು ಮತ್ತು ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ವ್ಯಾಪಾರ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಮುಂಬೈನಿಂದ ಡ್ರಗ್ಸ್ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿ ಉತ್ತಮ ಜಾಲವನ್ನು ಸ್ಥಾಪಿಸಿದ್ದರು. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.