ಬೆಂಗಳೂರು: ಕೈಯಲ್ಲಿ ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ, ಸಂಚಾರ ನಿರ್ವಹಣೆ ಮಾಡುವ ನಗರ ಪೊಲೀಸರು ಬುಧವಾರ ಸಸಿ ನೆಡುವ ಮೂಲಕ “ಪರಿಸರ ದಿನಾಚರಣೆ’ ಆಚರಿಸಿದರು.
ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ನಗರದ ಜಿ.ಕೆ. ಎಚ್.ಪಿ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಜತೆ ಗಿಡ ನೆಟ್ಟು ಪರಿಸರ ಜಾಗೃತಿ, ಪರಿಸರ ಮಹತ್ವದ ಬಗ್ಗೆ ಸಲಹೆ ನೀಡಿದರು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ಜಯನಗರ ಉಪವಿಭಾಗದ ಠಾಣೆಗಳಲ್ಲಿ ನಡೆದ ಆರಕ್ಷಕರ ಸಸಿ ನೆಡುವ ಕಾರ್ಯಕ್ಕೆ ಹಿರಿಯ ನಟ ಶ್ರೀನಾಥ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸಾಥ್ ನೀಡಿದರು.
ಜಯನಗರ, ಬಸವನಗುಡಿ, ಜೆ.ಪಿ ನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ಆವರಣಗಳಲ್ಲಿ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯ ಆಯೋಜಿಸಲಾಗಿತ್ತು. . ಠಾಣಾ ಸಿಬ್ಬಂದಿಯು ತಾವು ನೆಟ್ಟ ಸಸಿಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತುಕೊಂಡರು. ಜತೆಗೆ, ಪ್ರತಿವರ್ಷವೂ ಸಸಿ ನೆಟ್ಟು ಪೋಷಿಸುವುದಾಗಿ ಕಂಕಣ ತೊಟ್ಟರು.
ಸಿಬ್ಬಂದಿ ಹೆಸರಲ್ಲಿ ಒಂದೊಂದು ಸಸಿ: ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಎಸ್. ಪಾರ್ವತಮ್ಮ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ವಿಶೇಷವಾಗಿತ್ತು. ಠಾಣೆಯ ಆವರಣದಲ್ಲಿ 35ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಸಿಬ್ಬಂದಿಯ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟಿದ್ದು ವಿಶೇಷವಾಗಿತ್ತು.
ಹಲವು ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಿಬ್ಬಂದಿ ನಿವೃತ್ತರಾಗುತ್ತಾರೆ. ಅವರ ನೆನಪು ಸದಾಕಾಲ ಉಳಿಯುವಂತೆ ಸ್ಮರಣೀಯವಾಗಿಸಲು ಸಸಿಗಳನ್ನು ಅವರ ಹೆಸರಿನಲ್ಲಿ ನೆಡಲಾಯಿತು. ಇದು ನಾವು ಅವರಿಗೆ ಸಲ್ಲಿಸುವ ಗೌರವವೂ ಸಹ ಆಗಿದೆ. ಠಾಣೆಯ ಎಲ್ಲ ಸಿಬ್ಬಂದಿಗಳಿಗೂ ಸಸಿಯೊಂದನ್ನು ಕೊಡುಗೆಯಾಗಿ ನೀಡಿದ್ದು ಅದನ್ನು ಪೋಷಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಮಲ್ಲೇಶ್ವರಂ ಸಂಚಾರ ಠಾಣೆ ಸೇರಿದಂತೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಠಾಣಾ ವಿಭಾಗ, ಬಾಣಸವಾಡಿ ಸಂಚಾರ ಠಾಣೆ ಸಿಬ್ಬಂದಿಯೂ ವೃಕ್ಷ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಉಳಿದಂತೆ ನಗರದ ಹಲವು ಠಾಣೆಯ ಸಿಬ್ಬಂದಿಯು ಪರಿಸರ ದಿನದ ಅಂಗವಾಹಿ ನಡೆಸಿದ ಸಸಿನೆಡುವ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.