Advertisement

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ಲಾಠಿ ರುಚಿ

11:24 AM Jul 16, 2020 | mahesh |

ದೇವನಹಳ್ಳಿ: ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದು, ಜಿಲ್ಲೆ ಮತ್ತು ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೊರೊನಾ ಸಮುದಾಯದ ಹಂತಕ್ಕೆ ತಲುಪುವ ಸಾಧ್ಯತೆಗಳಿರುವುದರಿಂದ ಜನರು ಆತಂಕದಲ್ಲಿದ್ದಾರೆ. ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಯಿತು. ತರಕಾರಿ, ಔಷಧ ಅಂಗಡಿ, ಹಾಲು, ದಿನಸಿ ಅಂಗಡಿ, ಮಾಂಸದ ಅಂಗಡಿ, ಪೆಟ್ರೋಲ್‌ ಬಂಕ್‌ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

Advertisement

ಬಿಸಿ ಮುಟ್ಟಿಸಿದ ಪೊಲೀಸರು: ಸರ್ಕಾರ, ಒಂದು ವಾರ ಲಾಕ್‌ಡೌನ್‌ ಘೋಷಿಸಿರುವುದರಿಂದ ಬೆಳಗ್ಗೆಯಿಂದಲೇ ಸರಕು ಸಾಗಾಣಿಕೆ ವಾಹನ ಮಾತ್ರ ಸಂಚರಿಸಿದವು. ಅಲ್ಲದೆ ಲಾಕ್‌ಡೌನ್‌ ಉಲ್ಲಂಘಿಸಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಕೆಲವರಿಗೆ ಬುದ್ಧಿವಾದ ಹೇಳಿ, ವಾಪಸ್‌ ಕಳುಹಿಸಿ ಮಾಸ್ಕ್ ಧರಿಸುವಂತೆ ಸೂಚಿಸಿದರು.

ಎಲ್ಲ ಖಾಲಿ, ಖಾಲಿ: ಹೊಸ ಬಸ್‌ ನಿಲ್ದಾಣ, ಹಳೇ ಬಸ್‌  ನಿಲ್ದಾಣ, ಬಜಾರ್‌ ರಸ್ತೆ, ಗಿರಿ ಯಮ್ಮ ವೃತ್ತ, ತಾಲೂಕು ಕಚೇರಿ ರಸ್ತೆ, ಸೇರಿ ದಂತೆ ವಿವಿಧ ಕಡೆಗಳ ರಸ್ತೆಗಳು ಜನರಿಲ್ಲದೆ ಭಣಗುಟ್ಟಿದವು. ವಾಣಿಜ್ಯ ಮಳಿಗೆ, ಬಾರು, ಸೆಲೂನ್‌, ಟ್ಯಾಕ್ಸಿ, ಕ್ಯಾಬ್‌, ಬಸ್‌ ಸಂಚಾರ ಬಂದ್‌ ಆಗಿತ್ತು. ನಗರದ ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ಹಾಗೂ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ, ಏಕ ಮುಖ ಸಂಚಾರಕ್ಕೆ ಅನುಕೂಲ ಮಾಡಿದ್ದರು. ಲಾಕ್‌ಡೌನ್‌ನಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌
ಸ್ಥಗಿತಗೊಳಿಸಲಾಗಿದೆ. ನಗರದ ಹೊಸಬಸ್‌ ನಿಲ್ದಾಣದ ಹತ್ತಿರದಲ್ಲಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಬರುವ ವಾಹನ ಸವಾರರಿಗೆ ಲಾಠಿಯಿಂದ ವಾಹನಗಳಿಗೆ ಹೊಡೆದು ಏಕೆ ವಿನಾಕಾರಣ ಸಂಚರಿಸುತ್ತಿದ್ದೀರಿ?, ಮತ್ತೆ ಬಂದರೆ ವಾಹನ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ಸರ್ಕಾರದ ಆದೇಶ ಕಡ್ಡಾಯವಾಗಿ ಪಾಲಿಸಿ..
ಎಸಿಪಿ ಸುಬ್ರಹ್ಮಣ್ಯ ಮಾತನಾಡಿ, ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ದೇವನಹಳ್ಳಿ ಠಾಣೆ ಇರುವುದರಿಂದ ಲಾಕ್‌ಡೌನ್‌ ಸಂದರ್ಭದಲ್ಲಿ 60 ಸಿಬ್ಬಂದಿ ನಿಯೋಜಿಸಿಕೊಂಡು ಲಾಕ್‌ಡೌನ್‌ ಉಲ್ಲಂಘಿ ಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಜನರು ಮನೆಯಲ್ಲಿಯೇ ಇದ್ದು, ತಮ್ಮ ಆರೋಗ್ಯ
ಕಾಪಾಡಿಕೊಳ್ಳಬೇಕು. ಜನರು ಅಡ್ಡಾದಿಡ್ಡಿ ಓಡಾಡುತ್ತಿದ್ದರೆ, ವಾಹನ ವಶಕ್ಕೆ ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಸರ್ಕಾರದ
ಪ್ರತಿಯೊಂದು ಆದೇಶ ಪಾಲಿಸುವಂತಾಗಬೇಕು ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next