ಬಳ್ಳಾರಿ: ಜಿಲ್ಲೆಯಲ್ಲಿ ಕ್ರೀಡೆಗಳ ಬಗ್ಗೆ ಜಿಲ್ಲಾಡಳಿತವೇ ಎಷ್ಟು ನಿರಾಸಕ್ತಿ ವಹಿಸುತ್ತದೆ ಎಂಬುದಕ್ಕೆ ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಬಳಕೆಯಾಗದೆ ಧೂಳು ಹಿಡಿಯುತ್ತಿರುವ ಪೊಲಾರಿಸ್ ಸಾಹಸ ಕ್ರೀಡಾ ವಾಹನಗಳೇ ಪ್ರತ್ಯಕ್ಷ ಸಾಕ್ಷಿ. ವಾಹನ ಸಂಚರಿಸಲು ಪ್ರತ್ಯೇಕ ಟ್ರಾಫಿಕ್ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸದೆ, ವಾಹನಗಳನ್ನು ಖರೀದಿಸಿರುವುದೇ ವಾಹನಗಳು ನಿರುಪಯುಕ್ತವಾಗಲು ಕಾರಣವಾಗಿವೆ.
ಹಂಪಿ ಉತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ 2013ರಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮೂರು ಪೊಲಾರಿಸ್ ಸಾಹಸ ವಾಹನಗಳನ್ನು ಖರೀದಿಸಲಾಗಿತ್ತು. ಇದಕ್ಕೆ ಅಂದಿನ ಜಿಲ್ಲಾಧಿಕಾರಿ ಡಾ| ಅಮ್ಲಾನ್ ಆದಿತ್ಯ ಬಿಸ್ವಾಸ್ ಹೆಚ್ಚು ಜವಾಬ್ದಾರಿ ವಹಿಸಿದ್ದು, ಸಾಹಸ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕೆಂಬುದು ಅವರ ಮುಖ್ಯ ಉದ್ದೇಶವಾಗಿತ್ತು.
ಅದಕ್ಕಾಗಿ ಖಾಸಗಿ ಪ್ರಾಯೋಜಕತ್ವದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ವಾಹನಗಳನ್ನು ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೆ ಹಲವು ಹಂಪಿ ಉತ್ಸವಗಳು ಆಚರಿಸಿದರೂ, ಸಾಹಸ ಕ್ರೀಡೆಗಳಲ್ಲಿ ವಾಹನಗಳನ್ನು ಮಾತ್ರ ಬಳಕೆ ಮಾಡಲಿಲ್ಲ. ಅವುಗಳ ಪ್ರದರ್ಶನವೂ ಜನರ ಕಣ್ಣಿಗೆ ಬೀಳಲಿಲ್ಲ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿಂತಲ್ಲೇ ಸ್ಥಗಿತಗೊಂಡಿರುವ ಪೊಲಾರಿಸ್ ವಾಹನಗಳು ಬಳಕೆಗೆ ಬಾರದೆ ಧೂಳು ಹಿಡಿಯುತ್ತಿವೆ. ಕಳೆದ ಐದು ವರ್ಷಗಳಿಂದ ನಿಂತಲ್ಲೇ ನಿಂತಿದ್ದು, ಬ್ಯಾಟರಿ ಸೇರಿದಂತೆ ಇತರೆ ವಸ್ತುಗಳು ದುರಸ್ತಿಗೆ ಬಂದಿವೆ. ಎಲ್ಲವನ್ನೂ ಹೊಸದಾಗಿ ಅಳವಡಿಸಬೇಕಾಗಿದೆ. ಇದಕ್ಕಾಗಿ ಪುನಃ ಹಣ ಖರ್ಚು ಮಾಡಬೇಕಿದೆ. ಹಲವಾರು ಕಾರ್ಯಕ್ರಮಗಳ ನಿಮಿತ್ತ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸುವ ಮೇಲಧಿಕಾರಿಗಳು ಕಂಡು ಕಾಣದಂತೆ ತೆರಳುತ್ತಿದ್ದಾರೆ. ಕಣ್ಣೆದುರಿಗೆ ಧೂಳು ಹಿಡಿಯುತ್ತಿರುವ ವಾಹನಗಳ ಬಳಕೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಮುಂದಾಗದಿರುವುದು ಆಡಳಿತದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನೂ ಈ ಹಿಂದೆ ಗಣರಾಜ್ಯೋತ್ಸವ, ಸ್ವತಂತ್ರ ದಿನಾಚರಣೆಯಂದು ಗೃಹರಕ್ಷಕ ಸಿಬ್ಬಂದಿಗಳು ಪೊಲಾರಿಸ್ ವಾಹನಗಳನ್ನು ಬಳಸಿ, ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದ್ದರು. ಇದನ್ನು ಹೊರತುಪಡಿಸಿದರೆ, ಇನ್ನುಳಿದಂತೆ ವಾಹನಗಳ ಬಳಕೆಯಾಗಿಲ್ಲ. ಇದರಿಂದ ಲಕ್ಷಾಂತರ ರೂ. ಹಣ ನಷ್ಟವಾಗಿದ್ದು, ಕ್ರೀಡಾಸಕ್ತರಲ್ಲಿ ಬೇಸರ ಮೂಡಿಸಿದೆ.
ಸಾಹಸ ಕ್ರೀಡೆಗಳಿಗೆ ಬಳಸುವ ಪೊಲಾರಿಸ್ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಟ್ರಾಫಿಕ್ ಬೇಕು. ಆದರೆ, ಯಾವುದೇ ಟ್ರಾಕ್ ನಿರ್ಮಿಸದೆ, ವಾಹನಗಳನ್ನು ಖರೀದಿಸಿ, ಹಣವನ್ನು ಪೋಲು ಮಾಡಲಾಗಿದೆ. ವಾಹನಗಳ ಚಾಲನೆಗೆ ಪ್ರತ್ಯೇಕ ಟ್ರಾಕ್ ನಿರ್ಮಿಸಿ, ಅವುಗಳಿಗೆ ಇಂತಿಷ್ಟು ಶುಲ್ಕ ನಿಗದಿಪಡಿಸಿ, ಕ್ರೀಡಾಸಕ್ತರಿಗೆ ವಾಹನ ಚಲಾಯಿಸಲು ಅವಕಾಶ ಕಲ್ಪಿಸಬೇಕು. ಈ ಮೂಲಕ ವಾಹನಗಳನ್ನು ಬಳಸಬೇಕು. ಆದರೆ, ಇಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ ವಾಹನ ಖರೀದಿಸಿರುವುದು ಕ್ರೀಡಾಸಕ್ತರನ್ನು ಬೇಸರ ಮೂಡಿಸಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಐದು ವರ್ಷಗಳಿಂದ ಬಳಕೆಯಾಗದೆ ಸ್ಥಗಿತಗೊಂಡಿರುವ ಪೊಲಾರಿಸ್ ವಾಹನಗಳ
ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮೆಕಾನಿಕ್ ಸಹ ಬಂದು ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ರಿಪೇರಿ ಮಾಡಲಿದ್ದಾರೆ. ಜತೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನ ಸಂಚಾರಕ್ಕೆ ಪ್ರತ್ಯೇಕ ಟ್ರಾಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ.
ರೆಹಮತ್ ವುಲ್ಲಾ, ಸಹಾಯಕ ನಿರ್ದೇಶಕರು, ಯುವಜನ ಮತ್ತು ಕ್ರೀಡಾ ಇಲಾಖೆ.
ವೆಂಕೋಬಿ ಸಂಗನಕಲ್ಲು