ಕೊಪ್ಪಳ: ಆತ್ಮೀಯ ಸ್ನೇಹಿತನ ಸಿನಿಮಾದ ಹಾಡು ಬಿಡುಗಡೆಗೆ ಆಗಮಿಸಿದ್ದ ಖ್ಯಾತ ನಟ ಧ್ರುವ ಸರ್ಜಾ ಅವರು ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣದಲ್ಲಿಯೇ ರಾಣಾ ಸಿನಿಮಾದ ಹಾಡು ಬಿಡುಗಡೆ ಮಾಡಿದರು.
ಹೊಸಪೇಟೆ ಮೂಲದ ಪುರುಷೋತ್ತಮ ಗುಜ್ಜಲ, ಗುಜ್ಜಲ ಟಾಕೀಸ್ ಪ್ರೊಡಕ್ಷನ್‌ನಲ್ಲಿ ನಂದ ಕಿಶೋರ್ ನಿರ್ದೇಶಿಸುತ್ತಿರುವ ರಾಣಾ ಸಿನಿಮಾದಲ್ಲಿರುವ ಉಧೋ ಉಧೋ ಹುಲಿಗೆಮ್ಮ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕೆ. ಮಂಜು ಅವರ ಮಗ ಶ್ರೇಯಸ್ ಮಂಜು ಅಭಿನಯಿಸುತ್ತಿರುವ ರಾಣಾ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರ ಶ್ರೀ ಹುಲಿಗೆಮ್ಮ ದೇವಿಯ ಕುರಿತು ಹಾಡೊಂದಿದೆ. ಚಂದನ ಶೆಟ್ಟಿ ಹಾಡಿರುವ ಈ ಹಾಡನ್ನು ಧ್ರುವ ಸರ್ಜಾ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ಗೆಳೆಯನಿಗಾಗಿ ಇಲ್ಲಿಗೆ ಬಂದಿದ್ದೇನೆ. ಹೊಸಪೇಟೆ ನನಗೆ ಅಚ್ಚುಮೆಚ್ಚಿನ ಸ್ಥಳವಾಗಿದೆ. ಕನ್ನಡ ಚಿತ್ರರಂಗದ ನನ್ನ ಅಣ್ಣ ಚಿರಂಜೀವಿ ಸರ್ಜಾ ಹಾಗು ಪುನೀತ್ ರಾಜಕುಮಾರ ಅವರನ್ನು ನಾವು ಕಳೆದುಕೊಂಡಿದ್ದೇವೆ. ಇದೊಂದು ನೋವಿನ ಸಂಗತಿ. ಹೊಸಬರು ತಯಾರಿಸುವ ಸಿನಿಮಾಕ್ಕೆ ಇಲ್ಲಿನ ಜನ ಬೆಂಬಲಿಸಬೇಕೆಂದರು.
ಈ ವೇಳೆ ಗಂಡುಗಲಿ ಕೆ. ಮಂಜು, ಸಿನಿಮಾ ತಂಡದ ಇಮ್ರಾನ್ ಸೇರಿ ಹಲವರು ಹುಲಿಗೆಮ್ಮ ದೇವಿಗೆ ಪೂಜೆ ಸಲ್ಲಿಸಿ ಹಾಡು ಹಾಗು ಸಿನಿಮಾ ಯಶಸ್ವಿಗೆ ಪ್ರಾರ್ಥಿಸಿದರು. ಧ್ರುವ ಸರ್ಜಾ ಬರುತ್ತಿದ್ದಂತೆ ಅಭಿಮಾನಿಗಳು ನಟನನ್ನು ನೋಡಲು ಮುಗಿಬಿದ್ದರು. ವೇದಿಕೆ ಸೇರಿದಂತೆ ಅವರು ಹೋದಲ್ಲೆಲ್ಲ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಕಾರಣ ನೂಕನುಗ್ಗಲು ಉಂಟಾಗಿತ್ತು. ಈ ವೇಳೆ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದರು. ಇದನ್ನು ಗಮನಿಸಿದ ಧ್ರುವ ಸರ್ಜಾ ಅವರೇ ವೇದಿಕೆಯ ಮೇಲಿಂದ ತಾವೇ ಸೆಲ್ಫಿ ತೆಗೆದುಕೊಂಡರು.
ನಿರ್ಮಾಪಕ ಪುರುಷೋತ್ತಮ ಗುಜ್ಜಲ, ನಾಯಕ ನಟ ಶ್ರೇಯಸ್ ಮಂಜು, ಡಿವೈಎಸ್‌ಪಿ ಗಣೇಶ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಸೇರಿ ಇತರರಿದ್ದರು.