ಮಂಗಳೂರು: ಬುಧವಾರ ನಿಧನಹೊಂದಿದ ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪೊಳಲಿ ಜಯರಾಮ ಭಟ್ ಅವರ ಅಂತ್ಯಕ್ರಿಯೆ ಕದ್ರಿಯ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು.
ಇದಕ್ಕೂ ಮುನ್ನ ಎ.ಜೆ. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಮಂದಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಬಳಿಕ ಕದ್ರಿಯಲ್ಲಿರುವ ಅವರ ಮನೆಗೆ ಪಾರ್ಥಿವ ಶರೀರವನ್ನು ತಂದು ವೈದಿಕ ವಿಧಿಗಳನ್ನು ಪೂರೈಸಿ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಜಯರಾಮ್ ಭಟ್ ಅವರ ಪತ್ನಿ ಶುಭಾ ಭಟ್, ಪುತ್ರ ಚೇತನ್, ಪುತ್ರಿ ಚೈತ್ರಾ, ಅಳಿಯ ಅಮಿತ್ ಸಹಿತ ಕುಟುಂಬಿಕರು ಹಾಜರಿದ್ದರು.
ಶಾಸಕ ವೇದವ್ಯಾಸ ಕಾಮತ್, ಮಾಜಿ ಸದಸ್ಯರಾದ ಜೆ.ಆರ್. ಲೋಬೋ, ಐವನ್ ಡಿ’ಸೋಜಾ, ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್, ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಪ್ರಮುಖರಾದ ಕಟೀಲು ಅನಂತ ಆಸ್ರಣ್ಣ, ಶರವು ರಾಘವೇಂದ್ರ ಶಾಸ್ತ್ರಿ, ಕಲ್ಲಡ್ಕ ಪ್ರಭಾಕರ ಭಟ್, ಎ. ರಾಘವೇಂದ್ರ ರಾವ್, ಆರೂರು ಕಿಶೋರ್ ರಾವ್, ಹರಿಕೃಷ್ಣ ಪುನರೂರು, ಡಾ| ಎ.ಜೆ. ಶೆಟ್ಟಿ, ಡಾ| ಎಂ.ಬಿ. ಪುರಾಣಿಕ್, ಡಾ| ಎಂ. ಶಾಂತಾರಾಮ ಶೆಟ್ಟಿ, ಶ್ರೀನಾಥ ಹೆಬ್ಟಾರ್ ಸಹಿತ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಟಿ. ಸತೀಶ್ ಯು. ಪೈ ಸಂತಾಪ
ಜಯರಾಮ ಭಟ್ ನಿಧನಕ್ಕೆ ಎಂಎಂಎನ್‌ಎಲ್ ಎಕ್ಸಿಕ್ಯೂಟಿವ್ ಚೇರ್‌ಮನ್ ಟಿ. ಸತೀಶ್ ಯು. ಪೈ ಸಂತಾಪ ವ್ಯಕ್ತಪಡಿಸಿದ್ದಾರೆ.