Advertisement

ಪಿಓಕೆ ಪಾಕಿಸ್ಥಾನದ್ದೇ: ಫಾರೂಕ್‌ ಅಭಿಮತ

01:50 PM Nov 12, 2017 | Team Udayavani |

ಶ್ರೀನಗರ/ಹೊಸದಿಲ್ಲಿ:  ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ) ನ್ಯಾಯವಾಗಿ ಪಾಕಿಸ್ಥಾನಕ್ಕೇ ಸೇರಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದರೆ, ಆ ರಾಜ್ಯವನ್ನು ಸ್ವಾಯತ್ತ ಪ್ರಾಂತ್ಯವೆಂದು ಘೋಷಿಸಬೇಕೆಂದೂ ಎಂದಿದ್ದಾರೆ.
ಶನಿವಾರ ಮಾತನಾಡಿದ ಅವರು, “ಕಾಶ್ಮೀರ ವನ್ನು ಭಾರತ ಸಂಸ್ಥಾನದೊಳಗೆ ಸೇರಿಸುವಾಗ ಆಗಿನ ಕಾಶ್ಮೀರದ ಮಹಾರಾಜ ಹರಿ ಸಿಂಗ್‌, ಭಾರತ ಸರಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಭಾರತ ಮರೆತಿದೆ. ಈ 
ವಿಚಾರ ದಲ್ಲಿ ಕಾಶ್ಮೀರದ ಜನತೆಗೆ ದ್ರೋಹ ಮಾಡಿದ್ದರಿ ಂದಲೇ  ಪ್ರಕ್ಷುಬ್ಧ ಸ್ಥಿತಿ ಅಲ್ಲಿ ನಿರ್ಮಾಣವಾಗಲು ಕಾರಣ’ ಎಂದು ಆರೋಪಿಸಿದರು.

Advertisement

ಸ್ವತಂತ್ರವಾದರೆ ಅಪಾಯ: ಕಾಶ್ಮೀರ ಪ್ರತ್ಯೇಕತಾವಾದಿಗಳ “ಸ್ವತಂತ್ರ  ಪಾಕಿಸ್ಥಾನ’ ಪರಿಕಲ್ಪನೆಯನ್ನು ತಪ್ಪು ಎಂದು ಹೇಳಿರುವ ಪಾಕಿಸ್ಥಾನದ ಪ್ರಧಾನಿ ಶಾಹೀದ್‌ ಖಕ್ಕನ್‌ ಅಬ್ಟಾಸಿ ಹೇಳಿಕೆಯನ್ನು ಅನುಮೋದಿಸಿದ ಅಬ್ದುಲ್ಲಾ, “ಕಾಶ್ಮೀರ ಸ್ವತಂತ್ರ್ಯವಾದರೆ ಶಾಂತಿಗಿಂತ ಆತಂಕವೇ ಹೆಚ್ಚು. ಸ್ವತಂತ್ರ್ಯ ದೇಶವಾದಾಗ ಕಾಶ್ಮೀರದ ಸುತ್ತ ಮೂರು ಅಣುಬಾಂಬ್‌ಗಳುಳ್ಳ ರಾಷ್ಟ್ರಗಳು (ಭಾರತ, ಚೀನಾ, ಪಾಕಿಸ್ಥಾನ) ಇದ್ದಂತಾಗುತ್ತದೆ. ಕಾಶ್ಮೀರಿಗರಲ್ಲಿ ಅಲ್ಲಾನ ಹೆಸರು ಬಿಟ್ಟರೆ ಬೇರೇನೂ ಇಲ್ಲ. ಹಾಗಾಗಿ ಸ್ವಾತಂತ್ರ್ಯ ಕಾಶ್ಮೀರ ಪರಿಕಲ್ಪನೆ ಬಿಟ್ಟು ಈಗಿರುವಂತೆ ಕಾಶ್ಮೀರ ಭಾರತದೊಂದಿಗೇ ಇರಲಿ ಎನ್ನುವುದೇ ಲೇಸು. ಆದರೆ, ಅದಕ್ಕೆ ಸ್ವಾಯತ್ತ ಸ್ಥಾನಮಾನ ಸಿಗಬೇಕಷ್ಟೇ” ಎಂದು ಅವರು ಆಶಿಸಿದ್ದಾರೆ. 

ದೀನೇಶ್ವರ್‌ ನೇಮಕದ ಹಿಂದೆ ಅಮೆರಿಕ?: ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ದೀನೇಶ್ವರ್‌ ಶರ್ಮಾ ಅವರನ್ನು ನೇಮಿಸುವುದಕ್ಕೂ 27 ದಿನಗಳ ಮುನ್ನ ಅಮೆರಿಕದ ದಕ್ಷಿಣ ಏಷ್ಯಾ ರಾಷ್ಟ್ರಗಳ ವ್ಯವಹಾರಗಳ ಬ್ಯೂರೋದ ರಾಜಕೀಯ ವಿಭಾಗದ ಮುಖ್ಯಸ್ಥ ಜೊಶುಲಾ ಗೋಲ್ಡ್‌ ಬರ್ಗ್‌ ಹಾಗೂ ನವದೆಹಲಿಯಲ್ಲಿರುವ ಅಮೆ ರಿಕ ದೂತಾವಾಸ ಕಚೇರಿಯಲ್ಲಿನ ಅಧಿಕಾರಿ ಡೇವಿಡ್‌ ಅರುಲಾನಂಥಮ್‌ ಅವರು ಶ್ರೀನಗರಕ್ಕೆ ಭೇಟಿ ನೀಡಿದ್ದರೆಂದು “ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. 

ಸೆ. 27ರಂದು ಈ ಅಧಿಕಾರಿಗಳು ಶ್ರೀನಗರಕ್ಕೆ ಭೇಟಿ ನೀಡಿ, ಸಿಎಂ ಮೆಹಬೂಬಾ ಮುಫ್ತಿ ಸರಕಾರದ ಮೂವರು ಪ್ರಮುಖ ಸಚಿವರು, ಮಾನವ ಹಕ್ಕುಗಳ ವಕೀಲ ಪರ್ವೇಜ್‌ ಇನ್ರೊಜ್‌, ಜಮ್ಮು ಕಾಶ್ಮೀರ ಕೊವಾಲಿಯಷನ್‌ ಆಫ್ ಸಿವಿಲ್‌ ಸೊಸೈಟಿಯ ನಾಯಕ ಖುರ್ರಮ್‌ ಪರ್ವೇಜ್‌ ಹಾಗೂ ಇಬ್ಬರು ಪತ್ರಕರ್ತರನ್ನು ಭೇಟಿಯಾಗಿ ತೆರಳಿದ್ದರು. 
ಕಾಶ್ಮೀರದಲ್ಲಿ ಶಾಂತಿ ಮಾತುಕತೆಗೆ ಈಗ ಪ್ರಾಶಸ್ತ್ಯವಾದ ಸನ್ನಿವೇಶವಿದೆ ಎಂದು ಆ ಅಧಿಕಾರಿಗಳು ನೀಡಿದ ವರದಿಯನ್ನಾಧ ರಿಸಿಯೇ ಕೇಂದ್ರ ಸರಕಾರ ದೀನೇಶ್ವರ್‌ ಅವರನ್ನು ಶ್ರೀನಗರಕ್ಕೆ ಕಳುಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next