Advertisement

ವಿಷಬೆರಕೆ ಪ್ಲ್ರಾನ್‌ ಯಶಸ್ಸಿಗೆ ಸ್ವಾಮಿ ಹೋಮ!

06:00 AM Dec 22, 2018 | Team Udayavani |

ಚಾಮರಾಜನಗರ: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಸಾದಕ್ಕೆ ವಿಷ ಬೆರೆಸುವ ಪ್ಲ್ರಾನ್‌ ರೂಪಿಸಿ, ಅದರ ಯಶಸ್ಸಿಗಾಗಿ ಇಮ್ಮಡಿ ಸ್ವಾಮಿಯ ತೋಟದಲ್ಲಿ ಡಿ. 9ರಂದು ಹೋಮ ನಡೆಸಲಾಗಿರುವ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ, ಸಾಲೂರು ಮಠದ ಕಿರಿಯ ಸ್ವಾಮಿ ಇಮ್ಮಡಿ ಮಹದೇವಸ್ವಾಮಿಯ ಸೂಚನೆ ಮೇರೆಗೆ ಟ್ರಸ್ಟ್‌ ವ್ಯವಸ್ಥಾಪಕ ಮಾದೇಶ್‌ನ ಪತ್ನಿ ಅಂಬಿಕಾ ಡಿ. 7ರಂದು ಕೃಷಿ ಅಧಿಕಾರಿಯೋರ್ವರಿಂದ ಮೊನೊಕ್ರೋಟೋಫಾಸ್‌ ಕ್ರಿಮಿನಾಶಕ ಪಡೆದುಕೊಳ್ಳುತ್ತಾಳೆ. ಈ ವಿಷಯವನ್ನು ಇಮ್ಮಡಿ ಸ್ವಾಮಿಗೆ ತಿಳಿಸುತ್ತಾಳೆ. ಡಿ. 8ರಂದು ಇಮ್ಮಡಿ ಸ್ವಾಮಿ, ಸುಳ್ವಾಡಿ-ಮಾರ್ಟಳ್ಳಿ ಮಧ್ಯ ಇರುವ ಅಂಬಿಕಾ ಮತ್ತು ಮಾದೇಶ್‌ ಮನೆಗೆ ಆಗಮಿಸಿ ಅಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡುತ್ತಾರೆ.

ಸ್ವಾಮಿಯ ತೋಟದಲ್ಲಿ ಹೋಮ: ಡಿ. 9ರಂದು ವಡಕೆಹಳ್ಳ-ತಾಳಬೆಟ್ಟದ ಸನಿಹದಲ್ಲಿರುವ ಎಲಚಿಕೆರೆಯಲ್ಲಿರುವ ಇಮ್ಮಡಿ ಮಹದೇವಸ್ವಾಮಿಯ ತೋಟಕ್ಕೆ ಈ ಮೂವರೂ ತೆರಳುತ್ತಾರೆ. ಅಲ್ಲಿ ಹೋಮ ನಡೆಸಲಾಗುತ್ತದೆ. ಹೋಮದ ಪೂಜೆಯಲ್ಲಿ ಅಂಬಿಕಾ ಮತ್ತು ಮಾದೇಶ್‌ ದಂಪತಿ ಕುಳಿತುಕೊಳ್ಳುತ್ತಾರೆ. ಸ್ವಾಮಿ ನೇತೃತ್ವದಲ್ಲಿ ಹೋಮ ನಡೆಯುತ್ತದೆ. ಈ ಹೋಮವನ್ನು ತಮ್ಮ ಪ್ಲ್ರಾನ್‌ ಯಶಸ್ವಿಗೊಳ್ಳಲೆಂದು ಪ್ರಾರ್ಥಿಸಿ ನಡೆಸಲಾಗುತ್ತದೆ. ಹೋಮ ಮಾಡಿದ ನಂತರ ಅದೇ ತೋಟದಲ್ಲಿ ಗೋಪುರ ಶಂಕುಸ್ಥಾಪನೆ ನಡೆಯುವ ಡಿ. 14ರಂದು  ಅನ್ನಸಂತರ್ಪಣೆ ಸಂದರ್ಭದಲ್ಲಿ ಆಹಾರಕ್ಕೆ  ಕ್ರಿಮಿನಾಶಕ ಬೆರೆಸುವ ಪ್ಲ್ರಾನ್‌ ರೂಪುಗೊಳ್ಳುತ್ತದೆ. ದೊಡ್ಡಯ್ಯನಿಗೆ ವಿಷಯ ನೀಡುವುದು, ಇದಕ್ಕೆ ಮಾದೇಶ ಸಹ ಸಾಥ್‌ ನೀಡುವುದು ಎಂದು ನಿರ್ಧರಿಸಲಾಗುತ್ತದೆ. ಇಡೀ ದಿನ ಮೂವರೂ ಕುಳಿತು ಇದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಎಲ್ಲವನ್ನೂ ಒಪ್ಪಿಕೊಂಡ ಸ್ವಾಮಿ:
ಬಂಧನವಾದ ಬಳಿಕ ತಾನು ಮಾಡಿರುವ ಕೃತ್ಯದ ಬಗ್ಗೆ ಕೆಲವು ವಿಷಯ ಹೇಳಿ ಕೆಲವು ವಿಷಯ ಮುಚ್ಚಿಟ್ಟಿದ್ದ ಇಮ್ಮಡಿ ಮಹದೇವಸ್ವಾಮಿ, ಶುಕ್ರವಾರ ತನಿಖಾ ತಂಡಕ್ಕೆ ಎಲ್ಲ ವಿಷಯವನ್ನೂ ತಿಳಿಸಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಅಂಬಿಕಾ ಜೊತೆ ಅನೈತಿಕ ಸಂಬಂಧವಿದ್ದುದನ್ನೂ ಸ್ವಾಮಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ವಾಮಿ, ಮಾದೇಶ್‌ಗೆ ರಕ್ತದೊತ್ತಡ:
ಶುಕ್ರವಾರ ವೈದ್ಯರ ತಪಾಸಣೆ ವೇಳೆ ಇಮ್ಮಡಿ ಸ್ವಾಮಿ ಮತ್ತು ಮಾದೇಶ್‌ಗೆ ರಕ್ತದೊತ್ತಡ ಹೆಚ್ಚಿರುವುದು ಕಂಡು ಬಂದಿದೆ. ಹೀಗಾಗಿ ಶುಕ್ರವಾರವೇ ನ್ಯಾಯಾಂಗ ಬಂಧನಕ್ಕೊಪ್ಪಿಸಲು ಪೊಲೀಸರು ನಿರ್ಧರಿಸಿದ್ದಾರೆ.

Advertisement

ನಾಲ್ವರು ಆರೋಪಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಶುಕ್ರವಾರ ಸಹ ಆರೋಪಿಗಳ ವಿಚಾರಣೆ ನಡೆಸಲಾಯಿತು. ನಾಲ್ಕು ಕಡೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರ್‌ ನಡೆಸಲಾಯಿತು. ನಮ್ಮ ತನಿಖೆ ಸಂದರ್ಭದಲ್ಲಿ ಸಾಕಷ್ಟು ಮಾಹಿತಿಗಳು ದೊರೆತಿವೆ. ಹಾಗಾಗಿ ಮುಂಚಿತವಾಗಿಯೇ ಅಂದರೆ ಶುಕ್ರವಾರ ರಾತ್ರಿಯೇ ಆರೋಪಿಗಳನ್ನು ಕೊಳ್ಳೇಗಾಲ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಸದ್ಯಕ್ಕೆ ಪೊಲೀಸ್‌ ಕಸ್ಟಡಿಗೆ ಕೇಳುವುದಿಲ್ಲ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಕಸ್ಟಡಿಗೆ ಪಡೆಯಲಾಗುವುದು.
-ಧರ್ಮೇಂದರ್‌ಕುಮಾರ್‌ ಮೀನಾ, ಎಸ್ಪಿ

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next