Advertisement

ವಿಷ ಪ್ರಸಾದ ಪ್ರಕರಣ: ಮೃತ ಸರಸ್ವತಮ್ಮನ ಪುತ್ರಿ ವಿಚಾರಣೆ

12:40 AM Jan 29, 2019 | Team Udayavani |

ಚಿಕ್ಕಬಳ್ಳಾಪುರ: ಚಿಂತಾಮಣಿಯ ಗಂಗಮ್ಮ ಗುಡಿ ದೇವಾಲಯದಲ್ಲಿ ಶುಕ್ರವಾರ ಸಂಭವಿಸಿದ ವಿಷ ಪ್ರಸಾದ ಹಂಚಿಕೆ ಪ್ರಕರಣದ ಹಿಂದೆ ಅನೈತಿಕ ಸಂಬಂಧ ಕುರಿತಾದ ಸಂಗತಿ ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಘಟನೆಯಲ್ಲಿ ಮೃತರಾದ ಸರಸ್ವತಮ್ಮ ಅವರ ಮಗಳು ಗೌರಮ್ಮ ಎಂಬುವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು.

Advertisement

ಸ್ಥಳೀಯ ನರಸಿಂಹ ಪೇಟೆಯ ನಿವಾಸಿ, ಲೋಕೇಶ್‌ ಎಂಬಾತ ದೇಗುಲದ ಬಳಿ ವಿಷಪ್ರಸಾದ ಹಂಚಿಕೆ ಮಾಡಿದ ಲಕ್ಷ್ಮೀ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ತನ್ನ ಪತ್ನಿ ಗೌರಮ್ಮನನ್ನು ಕೊಲೆ ಮಾಡಲು ಲಕ್ಷ್ಮೀ ಹಾಗೂ ಆಕೆಯ ಸ್ನೇಹಿತೆ ಅಮರಾವತಿಗೆ ಕೇಸರಿಬಾತ್‌ನಲ್ಲಿ ವಿಷ ಬೆರೆಸಿ ಹಂಚುವಂತೆ ತಿಳಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಘಟನೆಯಲ್ಲಿ ಗೌರಮ್ಮನ ತಾಯಿ ಸರಸ್ವತಮ್ಮ ಕೂಡ ಮೃತ ಪಟ್ಟಿದ್ದು ಪೊಲೀಸರ ಈ ರೀತಿಯ ಅನುಮಾನಕ್ಕೆ ಬಲವಾದ ಕಾರಣವಾಗಿತ್ತು.

ಹೀಗಾಗಿ, ಲೋಕೇಶ್‌ನ ಪತ್ನಿ ಗೌರಮ್ಮನನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ ರೆಡ್ಡಿ ಖುದ್ದು ಚಿಂತಾಮಣಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸಿದರು. ತನ್ನ ಗಂಡ ಲೋಕೇಶ್‌, ವಿಷ ಪ್ರಸಾದ ಹಂಚಿಕೆ ಆರೋಪಕ್ಕೆ ಗುರಿಯಾಗಿರುವ ಲಕ್ಷ್ಮೀ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಕೂಡ ವಿಚಾರಣೆ ವೇಳೆ ಲಕ್ಷ್ಮೀ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್‌ ಮೂಲಗಳು ‘ಉದಯವಾಣಿ’ಗೆ ಖಚಿತಪಡಿಸಿವೆ.

ಈ ನಡುವೆ, ಸೋಮವಾರ ಬೆಳಗ್ಗೆ ಪೊಲೀಸರ ವಶದಲ್ಲಿರುವ ಲಕ್ಷ್ಮೀ ಎಂಬಾಕೆಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದು, ತಕ್ಷಣ ಆಕೆಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರ ಮೇಲೆ ಯಾವುದೇ ಪ್ರಕರಣ ದಾಖಲಾಗದ ಕಾರಣ ಇಬ್ಬರನ್ನೂ ಚಿಂತಾಮಣಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next