ಬೆಂಗಳೂರು: ಚಾಮಮರಾಜನಗರ ಜಿಲ್ಲೆ ಸುಳ್ವಾಡಿಯ ಕಿಚ್ಚುಗುತ್ತಿಯ ಮಾರಮ್ಮ ದೇಗುಲದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಶುಕ್ರವಾರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾ. ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪುನ್ನು ಕಾಯ್ದಿರಿಸುವುದಾಗಿ ಹೇಳಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ಇಮ್ಮಡಿ ಮಹದೇವಸ್ವಾಮಿ ದುರಂತದ ಮುಖ್ಯ ಹಾಗೂ ಪ್ರಮುಖ ಆರೋಪಿಯಾಗಿದ್ದಾರೆ.
16 ಮಂದಿಯನ್ನು ಬಲಿ ತೆಗೆದುಕೊಂಡಿರುವ ಇದೊಂದು ಗಂಭೀರ ಪ್ರಕರಣ, ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು, ಅವರು ಜಾಮೀನನ ಮೇಲೆ ಹೊರಗೆ ಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿ, ಈ ಪ್ರಕರಣದಲ್ಲಿ ಅರ್ಜಿದಾರರನ್ನು ಅನಗತ್ಯವಾಗಿ ಸಿಲುಕಿಸಿದ್ದಾರೆ. ಕಳೆದ ಡಿಸೆಂಬರ್‌ನಿಂದ ಅವರು ಕಾರಾಗೃಹದಲ್ಲಿದ್ದಾರೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಪೀಠಕ್ಕೆ ಕೇಳಿಕೊಂಡರು.
ಪ್ರಕರಣದ ಹಿನ್ನೆಲೆ: 2018ರ ಡಿಸೆಂಬರ್‌ನಲ್ಲಿ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಗೋಪುರ ಶಂಕುಸ್ಥಾಪನೆ ವೇಳೆ ಅನ್ನಸಂತರ್ಪಣೆಯ ಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥರಾಗಿ, 16ಮಂದಿ ಅಸುನೀಗಿದ್ದರು. ಪ್ರಸಾದದಲ್ಲಿ ವಿಷ ಬೇರೆಸಿರುವ ಅಂಶ ಬಯಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ಮತ್ತಿತರನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಈಗಾಗಲೇ ಸ್ವಾಮೀಜಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.