Advertisement
ಚಿತ್ರಕೇತು ಮಹಾರಾಜನು ಇಡೀ ಭೂಮಿಗೆ ಏಕಚ್ಛತ್ರಾಧಿಪತಿಯಾಗಿದ್ದರೂ ಈ ಯಾವ ಸಂಪತ್ತುಗಳು ಆತನನ್ನು ಸುಖಿಯಾಗಿಸಲು ಸಮರ್ಥವಾಗಲಿಲ್ಲ. ಹೀಗಿರಲು ಒಂದು ದಿನ ಶಾಪಾನುಗ್ರಹಸಮರ್ಥರಾದ ಆಂಗೀರಸ ಋಷಿಗಳು ವಿವಿಧ ಲೋಕಗಳನ್ನು ಸಂಚರಿಸುತ್ತ ಚಿತ್ರಕೇತುವಿನ ಅರಮನೆಗೆ ಪಾದಾರ್ಪಣೆಗೈದರು. ಮಹಾರಾಜನು ಅವರನ್ನು ಸ್ವಾಗತಿಸಿ ವಿಧಿವತ್ತಾಗಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ಅತಿಥಿ ಸತ್ಕಾರ ಮಾಡಿ ವರಾಸನದಲ್ಲಿ ಕುಳ್ಳಿರಿಸಿ ಅವರ ಕಾಲಬುಡದಲ್ಲಿ ರಾಜನು ವಿನಯದಿಂದ ಕುಳಿತುಕೊಂಡನು.
Related Articles
Advertisement
ಋಷಿಗಳ ಮಾತಿನಂತೆ ಮಹಾರಾಣಿಯು ಗರ್ಭವತಿಯಾಗಿ ಸಕಾಲದಲ್ಲಿ ಸುಂದರ ಪುತ್ರನಿಗೆ ಜನ್ಮವನ್ನು ನೀಡಿದಳು. ಇದನ್ನು ತಿಳಿದ ಮಹಾರಾಜನು ಸಂತೋಷಭರಿತನಾಗಿ ಸ್ನಾನ ಮಾಡಿ ಪವಿತ್ರನಾಗಿ ವಸ್ತ್ರಾಭರಣಗಳಿಂದ ಅಲಂಕೃತನಾಗಿ ಸ್ವಸ್ತಿವಾಚನವನ್ನು ಮಾಡಿಸಿ ವಿಪ್ರರಿಂದ ಆಶಿರ್ವಾದವನ್ನು ಪಡೆದು ಮಗುವಿಗೆ ಜಾತಕರ್ಮಾದಿ ಸಂಸ್ಕಾರವನ್ನು ಮಾಡಿದನು. ಈ ಸಂದರ್ಭದಲ್ಲಿ ಉದಾರಿಯಾದ ಚಿತ್ರಕೇತುರಾಜನು ಪುತ್ರನಿಗೆ ಕೀರ್ತಿ, ಆಯುಷ್ಯ ವೃದ್ಧಿಯಾಗಲೆಂದು ಎಲ್ಲರಿಗೂ ಕೊಡುಗೈಯಿಂದ ಬೇಡಿದ ವಸ್ತುಗಳನ್ನು ನೀಡಿದನು.
ಕಾಸಿನ ಮುಖವನ್ನೇ ನೋಡದ ಬಡವನಿಗೆ ಸಂಪತ್ತು ದೊರಕಿದರೆ ಅವನಿಗೆ ಅದರಲ್ಲಿ ಆದರಾತಿಥ್ಯವು ಉಂಟಾಗುವಂತೆ ಬಹಳ ಸಮಯದ ನಂತರ ಜನಿಸಿದ ಪುತ್ರನಲ್ಲಿ ಹಾಗು ಕೃತದ್ಯುತಿಯಲ್ಲಿ ರಾಜನಿಗೆ ಸಹಜವಾಗಿಯೇ ಪ್ರೀತಿ, ವಾತ್ಸಲ್ಯವು ದಿನೇ ದಿನೇ ವೃದ್ಧಿಯಾಗತೊಡಗಿತು. ತಾಯಿಯಾದ ಕೃತದ್ಯುತಿಗೂ ಮಗುವಿನಲ್ಲಿ ಸ್ನೇಹ-ಮಮತೆಯು ತುಂಬಿತುಳುಕುತ್ತಿತ್ತು. ಇಷ್ಟೇ ಅಲ್ಲದೇ ರಾಜನಿಗೆ ಇತರ ರಾಣಿಯರ ಬಗ್ಗೆ ಕಾಳಜಿಯೂ ಕಡಿಮೆಯಾಯಿತು. ಇದು ಉಳಿದ ರಾಣಿಯರ ಹೊಟ್ಟೆ ಉರಿಗೆ ಕಾರಣವಾಯಿತು. ಉಳಿದ ರಾಣಿಯರಿಗೆ ಸಂತಾನವಿಲ್ಲದ ದುಃಖ ಒಂದು ಕಡೆಯಾದರೆ ಮಹಾರಾಜನು ನಮ್ಮನ್ನು ಉಪೇಕ್ಷಿಸುತ್ತಿರುವನೆಂಬ ವೇದನೆ ಇನ್ನೊಂದು ಕಡೆ. ಈ ಎರಡೂ ವಿಷಾದಗಳಿಂದ ಜರ್ಝರಿತರಾದ ರಾಣಿಯರು ದ್ವೇಷದಿಂದ ಬುದ್ಧಿಗೆಟ್ಟು ರಾಜಕುಮಾರನನ್ನು ಹತ್ಯೆಮಾಡುವ ಸಲುವಾಗಿ ಮಗುವಿಗೆ ವಿಷವನ್ನು ಪ್ರಾಶನ ಮಾಡಿಸಿದರು. ತನ್ನ ಕಂದನು ಸತ್ತು ಹೋದುದನ್ನು ತಿಳಿದ ಕೃತದ್ಯುತಿಯು ಪುತ್ರ ಶೋಕದಿಂದ ಚೀರುತ್ತಾ ಮೂರ್ಛಿತಳಾಗಿ ಕೆಳಗೆಬಿದ್ದಳು.
ಮಹಾರಾಣಿಯ ಆಕ್ರಂದನವನ್ನು ಕೇಳಿದ ಅಂತಃಪುರದ ನಿವಾಸಿಗಳು ಅಲ್ಲಿಗೆ ಓಡಿಬಂದರು. ವಿಷವನ್ನು ತಿನ್ನಿಸಿದ ರಾಣಿಯರು ಬಂದು ಕಪಟ ರೋಧನವನ್ನು ಮಾಡಿದರು. ಪುತ್ರನ ಅಕಾಲಮರಣದ ವಾರ್ತೆಯನ್ನು ಕೇಳಿದ ಮಹಾರಾಜನೂ ಕಣ್ಣು ಕತ್ತಲೆ ಬಂದು ತಲೆ ತಿರುಗಿ ಕುಸಿದು ಬಿದ್ದನು. ಮಂತ್ರಿ-ಮಾಗಧರ ಉಪಚಾರದಿಂದ ಎಚ್ಚರಗೊಂಡ ರಾಜನು ಮುಗ್ಗರಿಸುತ್ತಾ ಮೆಲ್ಲನೆ ಎದ್ದು ಸಮಾಧಾನಗೊಂಡು ಮಂತ್ರಿ ಬ್ರಾಹ್ಮಣಾದಿ ಪರಿವಾರ ಸಹಿತನಾಗಿ ಸತ್ತಮಗುವಿನ ಸನಿಹಕ್ಕೆ ಬಂದು ಮಗನ ಮೃತದೇಹವನ್ನು ತಬ್ಬಿ ಮುದ್ದಾಡಿದನು. ಇದನ್ನು ಕಂಡ ಕೃತದ್ಯುತಿಯ ರೋಧನವು ಇನ್ನಷ್ಟು ತಾರಕಕ್ಕೇರಿತು. ಹೀಗೆ ಮಹಾರಾಜ ದಂಪತಿಗಳು ಪುತ್ರಶೋಕದಿಂದ ಚೇತನಾರಹಿತರಾಗಿರಲು ಆಂಗೀರಸ ಋಷಿಗಳು ಹಾಗೂ ನಾರದ ಋಷಿಗಳು ಅರಮನೆಗೆ ದಯಪಾಲಿಸಿದರು.
ಪುತ್ರ ಶೋಕದಿಂದ ಬಳಲಿರುವ ಮಹಾರಾಜನನ್ನು ಕುರಿತು ಇಬ್ಬರು ಋಷಿಗಳು “ ಎಲೈ! ರಾಜೆಂದ್ರ ಯಾರಿಗಾಗಿ ನೀನು ಇಷ್ಟು ಶೋಕಿಸುತ್ತಿರುವೆಯೋ ಆ ಬಾಲಕನ ಜೀವಾತ್ಮವು ಕಳೆದ ಜನ್ಮದಲ್ಲಿ ಬೇರೆ ಯಾವುದೋ ದಂಪತಿಗಳ ಸಂತಾನವಾಗಿತ್ತು. ಮುಂದಿನ ಜನ್ಮದಲ್ಲಿ ಬೇರೆ ಯಾರಿಗೋ ಮಗುವಾಗಿ ಜನಿಸುವುದು. ಅದರ ಮಧ್ಯದ ಈ ಸ್ವಲ್ಪ ಸಮಯದಲ್ಲಿ ನಿಮ್ಮಿಬ್ಬರ ಮಗನಾಗಿ ನಿಮ್ಮ ಋಣವನ್ನು ತೀರಿಸಿಕೊಂಡಿತು.
ಜೀವನವೆಂಬ ಪ್ರವಾಹದಲ್ಲಿ ಬಂದು ಹೋಗುವ ಸಂಬಂಧಗಳು ಹತ್ತು ಹಲವು, ಅವೆಲ್ಲವೂ ತಮ್ಮ ಋಣ ಮುಕ್ತವಾದ ಮೇಲೆ ನಮ್ಮನ್ನು ಬಿಟ್ಟು ದೂರವಾಗುತ್ತವೆ. ನಾವು, ನೀನು ಮತ್ತು ನಮ್ಮೊಂದಿಗೆ ಈ ಜಗತ್ತಿನಲ್ಲಿ ಎಷ್ಟು ಚರಾಚರ ಪ್ರಾಣಿಗಳು ವರ್ತಮಾನದಲ್ಲಿವೆಯೋ ಅವೆಲ್ಲವೂ ತಮ್ಮ ಜನ್ಮದ ಮೊದಲೂ ಇರಲಿಲ್ಲ ಹಾಗೂ ತಮ್ಮ ನಾಶದ ನಂತರವೂ ಇರಲಾರವು. ಸಮಸ್ತ ಪ್ರಾಣಿಗಳಿಗೂ ಅಧಿಪತಿಯಾದ ಭಗವಂತನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳಿಗೂ ನಾಶ ಖಚಿತ. ಭಗವಂತನಿಗೆ ಜನ್ಮ-ಮೃತ್ಯು ಮುಂತಾದ ವಿಕಾರಗಳಾಗಲೀ, ಯಾವುದೇ ಅಪೇಕ್ಷೆಗಳಾಗಲೀ ಇಲ್ಲ. ಮಕ್ಕಳು ವಿನೋದಕ್ಕಾಗಿ ಆಟದ ವಸ್ತುಗಳಿಂದ ಮನೆ, ಮಠ ಮುಂತಾದವುಗಳನ್ನು ರಚಿಸುತ್ತಾ – ಕೆಡಿಸುತ್ತಾ ಇರುವಂತೆ ಭಗವಂತನು ತಾನೆ ತಾನಾಗಿ ಜಗತ್ತನ್ನು ಸೃಷ್ಟಿಸುತ್ತಾ ಕಾಲಕಾಲಕ್ಕೆ ಪಾಲಿಸುತ್ತಾ ಸಂಹರಿಸುತ್ತಾನೆ.
ಹೀಗೆ ಮಹರ್ಷಿಗಳು ಚಿತ್ರಕೇತು ರಾಜನನ್ನು ಸಮಾದಾನ ಪಡಿಸಿ ತತ್ತ್ವೋಪದೇಶವನ್ನು ಮಾಡಿದಾಗ ರಾಣಿಯಿಂದೊಡಗೂಡಿದ ರಾಜನು ಧೈರ್ಯವನ್ನು ತಂದುಕೊಂಡು ಋಷಿಗಳನ್ನು ಕುರಿತು ಗುರುವರ್ಯರೇ “ವಿಷಯ ಭೋಗದಲ್ಲಿ ಸಿಲುಕಿರುವ ಮಂದ ಬುದ್ಧಿಯುಳ್ಳ ನಾನು ಗ್ರಾಮ್ಯಪಶುವಿನಂತೆ ಅಜ್ಞಾನಾಂಧಕಾರದಲ್ಲಿ ಮುಳುಗಿದ್ದು, ಜ್ಯೋತಿಸ್ವರೂಪರಾದ ತಾವು ನಮಗೆ ಜ್ಞಾನಜ್ಯೋತಿಯನ್ನು ತೋರಿ ಭಗವಂತನೆಡೆಗೆ ಕೊಂಡೊಯ್ಯಿರಿ “ ಎಂದು ವಿನಮ್ರನಾಗಿ ಬೇಡಿಕೊಂಡನು.
ಆಗ ಋಷಿಗಳು “ ನೀನು ಭಗವಂತನ ಭಕ್ತನಾಗಿದ್ದು ಶೋಕಿಸುವುದು ಉಚಿತವಲ್ಲ ಎಂದು ಯೋಚಿಸಿಯೇ ನಾವಿಬ್ಬರೂ ಇಲ್ಲಿಗೆ ಬಂದಿರುವೆವು. ಭಗವಂತನಲ್ಲಿ ಭಕ್ತಿಯುಳ್ಳವನು ಯಾವುದೇ ಸ್ಥಿತಿಯಲ್ಲಿಯೂ ಶೋಕ ಪಡಬಾರದು. ನಿನ್ನ ಮನೆಗೆ ನಾನು ಮೊದಲು ಬಂದಾಗಲೇ ನಿನಗೆ ಪರಮ ಜ್ಞಾನವನ್ನು ಉಪದೇಶಮಾಡಬಹುದಿತ್ತು. ಆದರೆ ನಿನ್ನ ಹೃದಯದಲ್ಲಿ ಪುತ್ರನ ಕುರಿತು ಇದ್ದ ಉತ್ಕಟವಾದ ಅಭಿಲಾಶೆಯನ್ನು ಕಂಡು ನಿನಗೆ ಜ್ಞಾನವನ್ನು ಕೊಡದೆ ಪುತ್ರನನ್ನೇ ಕೊಟ್ಟೆನು. ಅನಿತ್ಯವಾದ, ವಿಷಯ ಸುಖಕ್ಕೆ ಪೂರಕವಾದ ವಸ್ತುಗಳೆಲ್ಲವೂ ದುಃಖ – ಶೋಕಗಳಿಗೆ ಕಾರಣವಾಗಿದೆ ಎಂಬುದು ನಿನಗೂ ಸ್ವತಃ ಅನುಭವಕ್ಕೆ ಬಂದಿದೆ. ಅದಕ್ಕಾಗಿ ವಿಷಯಗಳಲ್ಲಿ ಅಲೆಯುತ್ತಿರುವ ನಿನ್ನ ಮನಸ್ಸನ್ನು ಶಾಂತಗೊಳಿಸಿ ಸ್ವಸ್ಥವಾದ ಮನಸ್ಸನ್ನು ಶಾಂತಿ ಸ್ವರೂಪವಾದ ಭಗವಂತನಲ್ಲಿ ನೆಲೆಗೊಳಿಸು ಇಂದಿನಿಂದ ಏಳು ರಾತ್ರಿಯಲ್ಲಿ ನಿನಗೆ ಭಗವಂತನ ಸಂಕರ್ಷಣ ರೂಪದ ದರ್ಶನವಾಗುವುದು. ಆಗ ನಿನಗೆ ಪರಮಪದ ಪ್ರಾಪ್ತಿಯ ಯೋಗವೂ ದೊರಕುವುದು” ಎಂದು ಅನುಗ್ರಹಿಸಿದರು.
ಮುಂದುವರೆಯುವುದು…
ಪಲ್ಲವಿ