ವಿಜಯಪುರ: ಕೋವಿಡ್ ಲಾಕ್‌ಡೌನ್ ಬಳಿಕ ಚಿತ್ರಮಂದಿರಗಳು ತೆರೆದರೂ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಆಗದಿದ್ದರಿಂದ ಬಿಕೋ ಎನ್ನುತ್ತಿದ್ದವು. ಇದೀಗ ಶುಕ್ರವಾರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “”ಪೊಗರು” ಬಿಡುಗಡೆಯಾಗಿದ್ದು, ಚಿತ್ರಮಂದಿರಗಳು ಮೊದಲಿನಂತೆ ಪ್ರೇಕ್ಷಕರಿಂದ ತುಂಬುತ್ತಿವೆ.
ಅಭಿಮಾನಿಗಳ ಸಂಭ್ರಮ: ವಿಜಯಪುರದ ಶ್ರೀ ಗೌರಿಶಂಕರ ಚಿತ್ರಮಂದಿರದಲ್ಲಿ “”ಪೊಗರು” ರಿಲೀಸ್ ಆಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು. ತಮಟೆ, ಡೋಲು, ಕುಣಿತ, ಧ್ರುವ ಸರ್ಜಾ ಬ್ಯಾನರ್, ಕಟೌಟ್‌ಗೆ ಹಾಲಿನ ಅಭಿಷೇಕ, ಚಿತ್ರ ಆರಂಭವಾಗುತ್ತಿದ್ದಂತೆ ಪರದೆ ಮುಂದೆ ಶಿಳ್ಳೆ, ನೃತ್ಯ ಹೀಗೆ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಯ್ತು ಶ್ರೀ ಗೌರಿಶಂಕರ ಚಿತ್ರಮಂದಿರ.
ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಈ ಸಂಬಂಧ ಉದಯವಾಣಿಗೆ ಪ್ರತಿಕ್ರಿಯಿಸಿದ ಚಿತ್ರಮಂದಿರದ ಮಾಲೀಕ ಎಂ.ಸತೀಶ್ ಕುಮಾರ್, ಕೋವಿಡ್ ಸಂಕಷ್ಟ ಇಳಿಮುಖವಾಗುತ್ತಿದ್ದಂತೆ ಸ್ಟಾರ್ ನಟರ ಚಿತ್ರಪ್ರದರ್ಶನಕ್ಕೆ ಚಿತ್ರಮಂದಿರ ಮಾಲೀಕರು ಮತ್ತು ವೀಕ್ಷಣೆಗೆ ಪ್ರೇಕ್ಷಕರು ಕಾಯುತ್ತಿದ್ದರು.
ಪೊಗರು ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಖರಾಬು ಹಾಡಿಗೆ ಜನ ಫಿದಾ ಆಗಿದ್ರು. ಬೆಳಗ್ಗೆ 6 ಗಂಟೆಗೆ ಫಸ್ಟ್ ಶೋ ಹಾಗೂ ಒಟ್ಟು ಮೊದಲ ದಿನ ನಮ್ಮ ಚಿತ್ರಮಂದಿರದಲ್ಲಿ ಐದು ಶೋ ಪ್ರದರ್ಶನ ಮಾಡಲಾಗಿದೆ. ಧ್ರುವ ಸರ್ಜಾರ ಅಭಿಮಾನಿಗಳ ಬಳಗ ಹಬ್ಬವನ್ನೇ ಮಾಡಿಬಿಟ್ಟರು ಎಂದರು. ಧ್ರುವ ಸರ್ಜಾ ಅಭಿಮಾನಿ ರವಿಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಚಿತ್ರಮಂದಿರಗಳು ಮುಚ್ಚಿದ್ದು, ಲಾಕ್‌ಡೌನ್ ನಂತರವೂ ಯಾವುದೇ ಸಿನಿಮಾ ನೋಡಬೇಕು ಎನಿಸಿರಲಿಲ್ಲ. ಈಗ ಧ್ರುವ ಸರ್ಜಾರ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಿದ್ದು, ಬೆಳಗ್ಗೆ 6 ಗಂಟೆ ಶೋ, ನಂತರ ಮಾರ್ನಿಂಗ್ ಶೋ ಸಹ ನೋಡಿದ್ದೇನೆ. ಫ್ಯಾಮಿಲಿ ಸೆಂಟಿಮೆಂಟ್ ಚೆನ್ನಾಗಿದ್ದು, ಕುಟುಂಬ ಸಮೇತರಾಗಿ ಚಿತ್ರವೀಕ್ಷಿಸಬಹುದು ಎಂದರು.
“ಪೊಗರು” ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿ ಗಳು ಪಟಾಕಿ ಸಿಡಿಸಿ, ತಮಟೆ ಡೋಲು, ಹೆಜ್ಜೆ ಹಾಕಿ ಸಂಭ್ರಮಿಸಿದರು. ಕಟೌಟ್ಸ್‌ಗೆ ಹಾಲಿನ ಅಭಿಷೇಕ ಮಾಡಿದರು. ಹಲವು ತಿಂಗಳುಗಳ ಬಳಿಕ ಚಿತ್ರಮಂದಿರ ತುಂಬಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಗೊಳಿಸಿ ದ್ದೇವೆ. ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿದ್ದೇವೆ.
–ಎಂ.ಸತೀಶ್ ಕುಮಾರ್, ಶ್ರೀ ಗೌರಿಶಂಕರ ಚಿತ್ರಮಂದಿರ ಮಾಲೀಕರು, ವಿಜಯಪುರ