ಚನ್ನಪಟ್ಟಣ: ಕಾವ್ಯದಲ್ಲಿ ಸಾಮಾಜಿಕ ಕಳಕಳಿ ಇರಬೇಕು. ಕವಿಗಳು ವರ್ತಮಾನ, ಭೂತ ಹಾಗೂ ಭವಿಷ್ಯಗಳನ್ನು ಮನಸಲ್ಲಿಟ್ಟುಕೊಂಡು ಕಾವ್ಯ ರಚಿಸಬೇಕು ಎಂದು ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಹೇಳಿದರು.
ಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕವಿ ಮಂಜೇಶ್ ಬಾಬು ಅವರ ‘ಜೀವನ’ ಹನಿಗವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕಾವ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವಾಗಬೇಕು. ಯುವ ಕವಿಗಳು ಪ್ರಸ್ತುತ ಸಮಾಜದ ಅವ್ಯವಸ್ಥೆಯನ್ನು ಬಿಂಬಿಸುವ ಕಾವ್ಯಗಳನ್ನು ರಚನೆ ಮಾಡಬೇಕು ಎಂದರು.
ಸ್ಥಳೀಯ ಕವಿಗಳನ್ನು ಗುರುತಿಸಿ: ಕಾವ್ಯ ರಚನೆಗೆ ಆಳವಾದ ಅಧ್ಯಯನ ಅಗತ್ಯ. ಹಿರಿಯ ಕವಿಗಳು ಹೇಗೆ ಕಾವ್ಯ ರಚನೆ ಮಾಡಿದ್ದಾರೆಂಬ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು. ಅವರನ್ನು ಮಾದರಿಯಾಗಿಸಿಕೊಂಡು ಕಾವ್ಯ ಸೃಷ್ಟಿಗೆ ಮುಂದಾಗಬೇಕು. ಸ್ಥಳೀಯ ಕವಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಅವರ ಕಾವ್ಯ, ಕಾದಂಬರಿ, ನಾಟಕಗಳ ಪುಸ್ತಕಗಳು ಪ್ರಕಟವಾಗಬೇಕು. ಆಗ ಮಾತ್ರ ಉತ್ತಮ ಕವಿಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ತೋಚಿದ್ದನ್ನು ಗೀಚುವ ಮನೋಭಾವ ಇರಲಿ: ವಿಮರ್ಶಕ ಡಾ.ಭೈರಮಂಗಲ ರಾಮೇಗೌಡ ಮಾತನಾಡಿ, ಪರಿಸರ, ರೈತರ ಸಮಸ್ಯೆ, ಗ್ರಾಮೀಣರ ಬದುಕು, ಪ್ರಸಕ್ತ ಸನ್ನಿವೇಶದ ವಿಚಾರಧಾರೆಗಳನ್ನು ಸೇರ್ಪಡೆ ಮಾಡಿಕೊಂಡು ಕಾವ್ಯ ರಚನೆ ಮಾಡಬೇಕು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡಬೇಕು, ತೋಚಿದ್ದನ್ನು ಗೀಚುವ ಮನೋಭಾವ ಇರಬಾರದು, ಕಾವ್ಯಕ್ಕೆ ಒಂದು ಘನತೆಯನ್ನು ಸೃಷ್ಟಿಸುವ ಕೆಲಸ ಯುವಕಗಳಿಂದ ಆಗಬೇಕು ಎಂದು ಹೇಳಿದರು.
ಹಿರಿಯದ ಹಾದಿಯಲ್ಲೇ ನಡೆಯಿರಿ: ಆದಿಚುಂಚನಗಿರಿ ಮಠದ ಶ್ರೀಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಷರದಿಂದ ಮಾತ್ರ ಎಲ್ಲವನ್ನೂ ಪಡೆಯಲು, ಸೃಷ್ಟಿಸಲು ಸಾಧ್ಯ. ನಿಟ್ಟಿನಲ್ಲಿ ಯುವಕಗಳು ಸಮಾಜದ ಸ್ವಾಸ್ಥ್ಯವನ್ನು ತಮ್ಮ ಸಾಹಿತ್ಯ, ಕಾವ್ಯದ ಮೂಲಕ ಸರಿಪಡಿಸಲು ಮುಂದಾಗಬೇಕು. ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಿರಿಯ ಕವಿಗಳನ್ನು ಸ್ಮರಣೆ ಮಾಡುವ ಮೂಲಕ ಅವರ ಹಾದಿಯಲ್ಲೇ ನಡೆಯಬೇಕು ಎಂದು ಸಲಹೆ ನೀಡಿದರು.
ಜೀವನ ಪುಸ್ತಕ ಕುರಿತುಸಾಹಿತಿ ಡಾ.ಸಿಪಿಲೆ ಸತೀಶ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು. ಯುವ ಬರಹಗಾರರ ಬಳಗದ ಸತೀಶ್ ಜವರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಸಿ.ಜಯಮುತ್ತು, ಸಾರ್ವಜನಿಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಮೆಹರೀಶ್, ಸರ್ವೋದಯ ಪ್ರತಿಷ್ಠಾನದ ಅಧ್ಯಕ್ಷ ಎಸ್.ಟಿ.ಶ್ರೀನಿವಾಸ್ ಹಾಜರಿದ್ದರು.