Advertisement

ಕಾವ್ಯ ಭ್ರಮೆಯಲ್ಲ ಸತ್ಯದ ಅಭಿವ್ಯಕ್ತಿ

09:38 PM Aug 04, 2019 | Lakshmi GovindaRaj |

ಹಾಸನ: ಕಾವ್ಯವು ಭ್ರಮೆಯಲ್ಲ. ಅದು ಸತ್ಯದ ಅಭಿವ್ಯಕ್ತಿ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ (ಸಿಪಿಕೆ) ಅಭಿಪ್ರಾಯಪಟ್ಟರು. ನಗರದ ಸಂಸ್ಕೃತ ಭವನದಲ್ಲಿ ನಗರದ ಮಾಣಿಕ್ಯ ಪ್ರಕಾಶನವು ಭಾನುವಾರ ಹಮ್ಮಿಕೊಂಡಿದ್ದ 3ನೇ ವರ್ಷದ ರಾಜ್ಯ ಮಟ್ಟದ ಕವಿ-ಕಾವ್ಯ ಸಂಭ್ರಮ ಹಾಗೂ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ, ಜನ್ನ ಕಾವ್ಯ ಪ್ರಶಸ್ತಿ, ಕಾಯಕ ಮಾಣಿಕ್ಯ ಪ್ರಶಸ್ತಿ, ಹೊಯ್ಸಳ ಸಾಹಿತ್ಯ ಪ್ರಶಸ್ತಿ, ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ವಚನ ಸಾಹಿತ್ಯದ ಅನುಸಂಧಾನ ಅಗತ್ಯ: ಭ್ರಮೆಯಿಂದ ಕಾವ್ಯಗಳು ರಚನೆಯಾಗುತ್ತವೆ ಎಂದು ಕೆಲವರು ಪರಿಗಣಿಸಿಸುತ್ತಾರೆ. ಆದರೆ ಕಾವ್ಯ ಭ್ರಮೆ ಅಲ್ಲ. ಸತ್ಯದ ಅಭಿವ್ಯಕ್ತಿ ಕಾವ್ಯಗಳಲ್ಲಿ ಇರುತ್ತದೆ. ಕಾವ್ಯಗಳಲ್ಲಿ ನಾವು ಕಾಣುವುದು ಸತ್ಯ. ವಚನಗಾರರು ನಮಗೆ ಪ್ರಜ್ಞಾಪೂರ್ವಕವಾಗಿ ಕೊಟ್ಟಿದ್ದು ಜೀವನದ ಅನುಭವ. ಹಾಗಾಗಿ ಎಲ್ಲಾ ದೃಷ್ಟಿಯಿಂದಲೂ ವಚನ ಸಾಹಿತ್ಯದ ಅನುಸಂಧಾನ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕಾವ್ಯ ಪ್ರಕಾರಕ್ಕೆ ಸಾವಿಲ್ಲ: ಆಯಾ ಕಾಲಮಾನದ ಸಮಾಜದಲ್ಲಿ ನಡೆಯುವ, ನಡೆಯುತ್ತಿರುವ ವಿದ್ಯಮಾನಗಳನ್ನು ಕಾವ್ಯದ ಮೂಲಕ ದಾಖಲಿಸುತ್ತಾ ಸಾಗುವುದರಿಂದ ಕಾವ್ಯ ಪ್ರಕಾರಕ್ಕೆ ಸಾವಿಲ್ಲ. ಬಸವಣ್ಣನವರು ತಮ್ಮ ವಚನದಲ್ಲಿ ಸಮಗ್ರ ಕಾವ್ಯದ ವಿಮರ್ಶೆಯನ್ನು ಕೊಟ್ಟಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಮಾತು ಸೌಹಾದರ್ಯದ ಬಗ್ಗೆ ಹೇಳುವ ಮಾತು. ಮಾಣಿಕ್ಯದ ದೀಪ್ತಿಯಂತಿರಬೇಕು. ಸ್ಪಟಿಕದ ಸಲಾಕೆಯಂತಿರಬೇಕು. ಹಿಂದಿನಿಂದಲೂ ಕಾವ್ಯದ ಬಗ್ಗೆ ವಿಮಶಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ. ಹಾಗಾಗಿ ಒಳ್ಳೆಯದನ್ನು ಎತ್ತಿ ಹಿಡಿದು, ಕೆಟ್ಟದನ್ನು ನಾಶ ಮಾಡುವಂತದ್ದು ಕಾವ್ಯ ರಚನೆಯ ಕರ್ತವ್ಯವಾಗಿದೆ ಎಂದು ಹೇಳಿದರು.

ಹಬ್ಬದ ವಾತಾವರಣ: ಪ್ರಾಸ್ತಾವಿಕ ನುಡಿಗಳನ್ನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್‌ ಎಸ್‌.ಉಪ್ಪಾರ್‌ ಅವರು, ಕಳೆದ ಸಾಲಿನಲ್ಲಿ 18 ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಆದರೆ ಈ ಬಾರಿ 38 ಕೃತಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಕಾವ್ಯಗಳ ಬಗ್ಗೆ ನುರಿತ ಕವಿಗಳು ತೀರ್ಪು ನೀಡಿದ್ದು, ಅಂತಿಮವಾಗಿ ಮೂರು ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಇಂದು ಎರಡು ವೇದಿಕೆಗಳಲ್ಲಿ ಕವಿಗೋಷ್ಠಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ ಎಂದು ಹೇಳಿದರು.

ಧಾರವಾಡದ ಡಾ.ಎಂ.ಡಿ.ಒಕ್ಕುಂದ ಅವರ ಅಡಗುದಾಣ ಕವನ ಸಂಕಲನ ಪ್ರಥಮ ಹಾಗೂ 3 ಸಾವಿರ ನಗದು ಬಹುಮಾನ, ಶಿವಮೊಗ್ಗದ ಎನ್‌.ರವಿಕುಮಾರ್‌ ಟೆಲೆಕ್ಸ್‌ ಅವರ ನಂಜಿಲ್ಲದ ಪದಗಳು ಕವನ ಸಂಕಲನ ದ್ವಿತೀಯ ಹಾಗೂ 2ಸಾವಿರ ರೂ. ನಗದು ಬಹುಮಾನ ಹಾಗೂ ಬೆಂಗಳೂರಿನ ಉಮಾ ಮುಕುಂದರವರ ಕಡೇ ನಾಲ್ಕು ಸಾಲು ತೃತೀಯ ಹಾಗೂ ಒಂದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

Advertisement

ಡಾ.ದೇ.ಜ.ಗೌ ಜ್ಞಾನವಾಹಿನಿ ಅಕಾಡೆುಯ ಅಧ್ಯಕ್ಷ ಡಾ. ಡಿ.ತಿಮ್ಮಯ್ಯ, ನಿವೃತ್ತ ಎಂಜಿನಿಯರ್‌ ಎಂ.ಜಿ.ಸೋಮಶೇಖರ್‌, ಸಾಹಿತಿಗಳಾದ ಸುಬ್ಬುಹೊಲೆಯಾರ್‌, ಹೇಮರಾಗ, , ರಿಯ ಸಾಹಿತಿ ಎನ್‌.ಶೈಲಜಾ ಹಾಸನ್‌, ಮಾಣಿಕ್ಯ ಪ್ರಕಾಶನದ ಪ್ರಕಾಶಕ ದೀಪಾ ಉಪ್ಪಾರ್‌, ಡಾ.ಸಾವಿತ್ರಿ,, ಟಿ.ಸತೀಶ್‌, ಜವರೇಗೌಡ, ಹೆತ್ತೂರು ನಾಗರಾಜ್‌, ತಮ್ಲಾಪುರ ಗಣೇಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next