ಕಲಬುರಗಿ: ಲಕ್ಷಾಂತರ ಜನರು ಕನ್ನಡ ಸ್ನಾತಕೋತರ ಪದವಿ ಮುಗಿಸಿದ್ದಾರೆ. ಕವಿಗಳ ಸಾಲಿನಲ್ಲಿ ನಿಲ್ಲುವರು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ ಮಹಿಳೆಯರೂ ಕವನ ರಚಿಸಿ, ವಾಚನ ಮಾಡಿದ್ದೂ ಹೆಮ್ಮೆ ವಿಷಯವಾಗಿದೆ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹೇಳಿದರು.
ಅಖೀಲ ಭಾರತ ಶಿವಾನುಭವ ಮಂಟಪದಲ್ಲಿ ಕಾವ್ಯಾಂಜಲಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಕಾವ್ಯಾಂಜಲಿ ಕವಿಗೋಷ್ಠಿ, ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬರವಣಿಗೆ ಕಲೆ ಹೆಚ್ಚಿಸಿಕೊಳ್ಳಬೇಕು ಎಂದರಲ್ಲದೇ, ಸ್ತ್ರೀಯರಲ್ಲಿನ ಕವನ ಬರವಣಿಗೆ ಉತ್ಸಾಹಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಮಹಿಳಾ ಸಾಹಿತಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಸಿಗುವಂತಾಗಲಿ. ಮಹಿಳೆಯರ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ, ಬೆಳವಣಿಗೆಗೆ ಶರಣ ಸಂಸ್ಥಾನದಿಂದ ಸದಾಕಾಲ ಸಹಕಾರ, ಪ್ರೋತ್ಸಾಹ ದೊರೆಯುತ್ತದೆ ಎಂದರು.
ಪೂಜ್ಯ ದಾಕ್ಷಾಯಣಿ ಅವ್ವ ಮಾತನಾಡಿ, ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ. ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಮಂಗಲಾ ವಿ. ಕಪ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲೀಲಾವತಿ ಕುಲಕರ್ಣಿ, ಪರವೀನ್ ಸುಲ್ತಾನ್, ವಿಶಾಲಾಕ್ಷಿ ಕರಡ್ಡಿ, ಶಕುಂತಲಾ ಪಾಟಿಲ, ಶಾಂತಲಾ ಪಸ್ತಾಪುರ, ನೀತಾ ಹಾಗೂ ಡಾ| ಶರಣಬಸವಪ್ಪ ಅಪ್ಪ , ದಾಕ್ಷಾಯಣಿ ಅವ್ವ ಹಾಗೂ ಚಿ. ದೊಡ್ಡಪ್ಪ ಅಪ್ಪ ಕುರಿತು ಕಾವ್ಯವಾಚನ ಮಾಡಿದರು. ಸುರೇಖಾ ಸಾಗರ, ಸುರೇಶ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಶಾಮಲಾ ಕುಲಕರ್ಣಿ ನಿರೂಪಿಸಿದರು, ಮಲ್ಲಿಕಾರ್ಜುನ ಮಣ್ಣೂರ, ಪ್ರೊ| ಚಂದ್ರಶೇಖರ ನರಕೆ, ಡಾ| ನೀಲಾಂಬಿಕಾ ಶೇರಿಕಾರ, ಡಾ| ಸಿದ್ಧಮ್ಮ ಗುಡೇದ, ಡಾ| ಶಿವರಾಜಶಾಸ್ತ್ರೀ ಹೆರೂರ, ಕೃಪಾಸಾಗರ ಗೊಬ್ಬೂರ ಹಾಗೂ ಮುಂತಾದವರಿದ್ದರು.