Advertisement

ಕಾಯ ಮೀರಿದ ಕಾವ್ಯ 

12:49 PM Dec 22, 2017 | |

ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವೆನು… ನಿತ್ಯ ಪಡಸಾಲೆಯಲ್ಲಿ ಕಡಗೋಲಿನ ಲಯಬದ್ಧ ತಾಳದೊಂದಿಗೆ ನನ್ನಜ್ಜಿಯ ಕಂಚಿನ ಹೆಣ್ಣುಕಂಠದಿಂದ ಉದಯರಾಗವು ಹೊರಡದಿದ್ದರೆ ಮೊಸರಿನಿಂದ ಎದ್ದು ಬರಲು ಬೆಣ್ಣೆಗೂ ಬೇಸರ, ಮೂಡಿನಲಿ ಮೂಡಲು ಆ ನೇಸರಗೂ ಬೇಸರ. ಕ್ಷೀರಸಾಗರ ಮಥನಕ್ಕಿಂತಲೂ ದೀರ್ಘ‌ವಾದ ಈ ಕಡೆಯುವಿಕೆಯಲ್ಲಿ ರಂಗಯ್ಯನನ್ನೋ ಕೃಷ್ಣಯ್ಯನನ್ನೋ ಮನೆ ಬಾಗಿಲಿಗೇ ಕರೆಯುವ ಕೀರ್ತನೆಗಳು ಪುಂಖಾನುಪುಂಖವಾಗಿ ಒಂದರ ಹಿಂದೆ ಒಂದರಂತೆ ಪಡಸಾಲೆಯಿಂದ ಹೊರಟು ಹೊಸ್ತಿಲಲೇ ನಿಂತು ಹೊರಗಿಣುಕುತ್ತಿದ್ದವು. ಆಗ ಮನೆ ಬಾಗಿಲಿಗೇ ಬಂದು ಒಳಗಿಣುಕುವ ಸೂರ್ಯನನ್ನು ಕಂಡು “ಆಹಾ! ಮೂಡಿ ಬಂದಿರಾ ಸೂರ್ಯದೇವರೇ!’ ಎನ್ನುತ್ತ ಸೂರ್ಯನಮಸ್ಕಾರ ಮಾಡುವುದರೊಂದಿಗೆ ಅಜ್ಜಿಯ  ದಿನ ಆರಂಭವಾಗುತ್ತಿತ್ತು. ಅದುವರೆಗೆ ಗಾಳಿಗೇ ಮಿಡಿವ ತಂಬೂರದಂತೆ ಶ್ರುತಿಗೊಳ್ಳುತ್ತಿದ್ದ ಕೊರಳಹಕ್ಕಿಗಳು ಇದ್ದಕ್ಕಿದ್ದಂತೆ ಧ್ಯಾನಸ್ಥ ಸ್ಥಿತಿಗೇರಿದ ಋಷಿಗಳಂತೆ ಕಣ್ಣುಗಳಲ್ಲೇ ಸೂರ್ಯಪಾನ ಮಾಡುತ್ತ ಎದೆಯ ಬಾಗಿಲಲ್ಲಿ ನಿಂತ ಬೆಳಕುದೇವನನ್ನು ಒಳಗೆ ಬರಮಾಡಿಕೊಳ್ಳುತ್ತಿದ್ದವು. 

Advertisement

ಸಂಸಾರ ತೊರೆದು ಸನ್ಯಾಸಿಗಳಾದ ಹರಿದಾಸರ ಕೀರ್ತನೆಗಳು ಅಜ್ಜಿಯೊಳಗಿಂದಾಗಿ ಹೊರಡುವಾಗ, “ದೇವರೇ, ಈ ಸಂಸಾರವನ್ನು ತೊರೆದು ನೀನಿದ್ದಲ್ಲಿ ನಾನು ಬರಲಾರೆ, ನಾನಿದ್ದಲ್ಲಿ ನೀನೇ ಬಾ’ ಎಂದು ಹೊಸ್ತಿಲಲಿ ಹೊರಗಿಣುಕುವ ಹೆಣ್ಣು ಅಂತರಂಗದ ಮೊರೆತವಾಗುತ್ತವಲ್ಲ! ಅದಕ್ಕೇ ಅವರ ದೇವರಿಗೆ ನಿತ್ಯ ಮುಂಜಾನೆ ಕರೆಗೆ ಓಗೊಡುತ್ತ ಒಳ ಬಂದು ಪಡಸಾಲೆಯ ದೇವರಕಿಂಡಿಗಳಲ್ಲಿ ತಳವೂರುವುದು ರೂಢಿಯಾಗಿಬಿಟ್ಟಿದೆ. ಸಂಜೆ ಭಜನೆ ಮಾಡುತ್ತ ತಮ್ಮ ಸಂಸಾರದ ಭೂಭಾರವನ್ನು ಅವನ ತಲೆಯ ಮೇಲೆ ಹೊರಿಸಿ ಪಡುಕಡಲಿಗೆ ಕಳುಹಿಸಿ ಹೂಹಗುರ ಇವರು. ಕತ್ತಲಾಯಿತೆಂದು ಅತ್ತರೆ ನಕ್ಷತ್ರ ನೋಡುವ ಭಾಗ್ಯ ಉಂಟೆ? ಇರುಳಲಿ ಮತ್ತೆ ದಿನದ ಕನಸು. ಇದು ಚೌಕದೊಳಗೇ ಕುಳಿತವರ ಕತೆಯಾದರೆ ಇನ್ನು ಕೆಲವರದ್ದು  ಒಳನಿಂದರೆ ಹೊರಗಣ ಹಕ್ಕಿಯ ಕೂಗು! ಹೊರ ಬಂದರೆ ಒಳಗಣ ಹಕ್ಕಿಯ ಕೂಗು! ಒಳ ಹೊರಗೆ ಬರೇ ಬೇಯುವಿಕೆ ! ಎಂಬ ತ್ರಿಶಂಕು ಸ್ಥಿತಿ.

ಈ ಲೌಕಿಕ ಚೌಕವನ್ನು, ಆಕಾರವನ್ನು ಮೀರಿ ನಿರಾಕಾರಕ್ಕೆ ಅನಂತಕ್ಕೆ ಅತೀತಕ್ಕೆ ಏರಿದ ದಿಟ್ಟ ಸ್ತ್ರೀ ಅಕ್ಕಮಹಾದೇವಿ. ಹೆಣ್ಣು ಎಂದರೆ ಬರೇ ದೇಹವಲ್ಲ, ಆತ್ಮ ಎಂಬುದನ್ನು ಸಾರಿದ ಕಾಮ ಮೀರಿದ ಪ್ರೇಮಕಾವ್ಯವೀಕೆ. ದೇವರನ್ನು ತಾನಿದ್ದಲ್ಲಿಗೆ ಕರೆದವಳಲ್ಲ, ಮೈಯಲ್ಲೇ ಬೆಳಕು ಹೊತ್ತ ಮಿಂಚುಹುಳದಂತೆ ಹೊಳೆವ ಆತ್ಮವ ಹೊತ್ತು ತನ್ನ ಬೆಳಕಲ್ಲೇ ಹುಡುಕುತ್ತ ಹೊರಟವಳು. ಕೋಗಿಲೆಯಂತೆ ರೆಕ್ಕೆಬಿಚ್ಚಿ ಕೊರಳಲೇ ಕುಹೂ ಕೊಳಲು ನುಡಿಸುತ್ತ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ತೆರಹಿಲ್ಲದ, ಕುರುಹಿಲ್ಲದ ಚೆಲುವಂಗೆ, ನಿಸ್ಸೀಮಂಗೆ ನಾನೊಲಿದೆ… ಎನ್ನುತ್ತ ತನ್ನೆದೆಯ ವಚನಗಳಲ್ಲೇ ಭವಭಯಗಳ ಸೀಮೆ ದಾಟಿ ಅಮೂರ್ತಕ್ಕೇರಿದ ಜಂಗಮಳು. ಗಂಡೂ ಅಲ್ಲದ ಹೆಣ್ಣೂ ಅಲ್ಲದ ಸಂತ ಸ್ಥಿತಿಗೆ, ಬಾಹುಬಲಿಯ ಸ್ಥಿತಿಗೆ ಏರಿದವಳು. ಲಿಂಗ ಮೀರಿದ ಭಾಷೆ, ಭಾಷೆ ಮೀರಿದ ಭಾಷ್ಯ, ಕಾಯ ಮೀರಿದ ಕಾವ್ಯವಾದವಳು. 

ಉಳಿದವರ ಗತಿಯೇನು?
“ಅಕ್ಕ ಬಿಟ್ಟು ಹೋದಳು, ಭಾವನ ಪಾಡೇನು?’ ಎನ್ನುವವರಿದ್ದಾರೆ ಕೆಲವರು. ಸಿದ್ದಾರ್ಥನನ್ನು ಬುದ್ಧನನ್ನಾಗಿಸಲು ತ್ಯಾಗ ಮಾಡಿದ ಯಶೋಧರೆ!  ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳೆ ! ಮಹಾತ್ಮರನ್ನು ಅವರ ಸತಿಯರ ನಿಟ್ಟುಸಿರು ಎಡೆಬಿಡದೆ ಹಿಂಬಾಲಿಸುತ್ತಲೇ ಇರುತ್ತದೆಯಲ್ಲ? ಮದುವೆಯಾದ ಮೇಲೆ ನಾಲ್ಕು ಗೋಡೆಗಳ ನಡುವೆಯೇ ನಲುಗಬೇಕಾದ ಆಯ್ಕೆಯೇ ಇಲ್ಲದ ಜೀವನ ಸ್ತ್ರೀಯರದ್ದು. ತವರುಮನೆಯಲ್ಲಿ ಕಲಿತ ಒಡಿಸ್ಸಿ, ಕಥಕ್‌, ಭರತನಾಟ್ಯ, ಕೂಚುಪುಡಿ, ಯಕ್ಷಗಾನ., ದೀಪನೃತ್ಯಗಳೆಲ್ಲ ಹೊಕ್ಕಮನೆಯ ರುದ್ರತಾಂಡವದ ಬಿರುಗಾಳಿಗೆ ಆರಿಹೋಗುತ್ತವೆಯಲ್ಲ?

ಮನುಷ್ಯನ ಕಲ್ಪನೆಗಳಲ್ಲಿ ಅರಳಿದ ದೇವರಿಗೂ ನಮ್ಮಂತೆಯೇ ಮಣ್ಣಮೋಹ ! ಹೆಣ್ಣು ಸಂಸಾರ ಮಾಡಲಿಕ್ಕೇ ಇರುವವಳೆಂಬ ಸಸಾರ. ಚಿತ್ರಗಳಲ್ಲಿಯೂ ಸ್ತ್ರೀಯರನ್ನು ತಪಸ್ಸಿನ ಭಂಗಿಯಲ್ಲಿ ನಾವು ನೋಡುವುದೇ ಇಲ್ಲ. ಪತಿವ್ರತಾಧರ್ಮದಿಂದ ಸತಿಯರಿಗೆ ಅತೀಂದ್ರಿಯ ಶಕ್ತಿ ಲಭ್ಯವಾಗಿ ಅಸಾಧಾರಣ ಸ್ತ್ರೀಯರಾದುದನ್ನೂ ನೋಡಿದ್ದೇವೆ. ಆದರೆ ಪತಿಯನ್ನು ನಿಷ್ಠೆಯಿಂದ ಸೇವಿಸುತ್ತ ದೇವರೆಂದು ಪೂಜಿಸಿದುದರಿಂದ ದೊರೆತ ಗಂಡಿನ ಯೋಗ್ಯತೆಯಾಗಿಯೇ ಪ್ರತಿಫ‌ಲಿಸುತ್ತದೆ ಅದು. ಪಾರ್ವತಿ ತಪಸ್ಸು ಮಾಡಿದರೂ ಅದು ಪತಿಪರಮೇಶ್ವರನನ್ನು ಮತ್ತೆ ಪಡೆಯಲಿಕ್ಕಾಗಿಯೇ! 
ಬದುಕಿನಲ್ಲಿ ಒಂದು ಗಂಭೀರ ಉದ್ದೇಶವಿಟ್ಟುಕೊಂಡು ಅಧ್ಯಾತ್ಮದ ಹಾದಿ ಹಿಡಿದು ಆತ್ಮಸಾಕ್ಷಾತ್ಕಾರ ಮಾಡಿಕೊಂಡವಳು ಇರುವಳೇ? ಎಂದು ಹುಡುಕತೊಡಗಿದಾಗ ಶಬರಿ ಎಂಬವಳು ಸಿಕ್ಕಿಯೂ ಸಿಕ್ಕದಂತೆ ಸಿಕ್ಕದೆಯೂ ಸಿಕ್ಕಿದಂತೆ ಸಿಕ್ಕಿಯೇ ಬಿಟ್ಟಳಲ್ಲ ! ಆಗಿನ ಸಮಾಜದಲ್ಲಿ  ಕೆಳಸ್ತರವೆನಿಸಿಕೊಂಡ ಬೇಡರಕುಲದವಳು. ತನ್ನ ಮದುವೆಯ ಭೋಜನ ಕ್ಕೆಂದು ತಂದ ಜಿಂಕೆಹಿಂಡುಗಳನ್ನು ಕಂಡು ಜೀವಹಿಂಸೆಯನ್ನು ಧಿಕ್ಕರಿಸಿ ಓಡಿಹೋದಳಂತೆ! ಮತಂಗಮುನಿಯಿಂದ ಪಡೆದ ಸಂಸ್ಕಾರದಿಂದ  ಶ್ರೀರಾಮನ ಜೀವರೂಪವನ್ನು ತನ್ನೊಳಗೇ ಅಚ್ಚಿನಲೇ ತುಂಬಿಟ್ಟುಕೊಂಡು ಜೀವನದಿಯಂತೆ ಹರಿದ ಸ್ತ್ರೀಶಕ್ತಿಯ ತೇಜೋಪುಂಜವಾದ  ಶಬರಿಯು  ವರ್ಣ, ವರ್ಗ ಹಾಗೂ ಲಿಂಗದ ಹಂಗಿಲ್ಲದ  ಕಾವ್ಯ ಪ್ರತಿಮೆ. ಕಲ್ಪನಾ ಚಾವ್ಲಾ, ಮದರ್‌ ತೆರೆಸಾ, ಮಲಾಲಾ… ಈ ಶಬರಿಯದ್ದೇ, ಅಕ್ಕನದ್ದೇ ಮುಂದುವರಿದ ಭಾಗವೋ ಏನೋ! ಸು.ರಂ. ಎಕ್ಕುಂಡಿಯವರ  ಕಥನಕವನವಾದ ಶಬರಿಯ ಪರಮಾತ್ಮ ಥೇಟ್‌ ಅವಳಂತೆಯೇ ಸಾತ್ತಿಕ ಶಬರ ;

Advertisement

ಶಬರಿಯ ಗುಡಿಸಲಿನಂಗಳದಲ್ಲಿ ರಾಮಚಂದ್ರ ಬಂದ
ಚಂದ್ರಬಿಂಬ ಮುಖ ತುಂಬಿ ಮುಗುಳುನಗು ನೀಲವರ್ಣದಿಂದ
ಕಟ್ಟಿಕೊಂಡ ಜಡೆಯಲ್ಲಿ ಮುಡಿಯಲ್ಲಿ ಇಟ್ಟ ಹೂವನೊಂದ
ತೂಗುತಿತ್ತು ಬತ್ತಳಿಕೆ ಬಿಲ್ಲು ಹೆಗಲಲ್ಲಿ ಠೀವಿಯಿಂದ 
ಶಬರಿ ನೋಡಿದಳು ಶ್ರೀರಾಮ ರೂಪ ಶ್ರೀರಾಮ ರಾಮ ಎಂದು
ಕುಳ್ಳಿರೆಂದು ಜಗಲಿಯಲಿ ಹಾಸಿದಳು ಹರಕು ಚಾಪೆ ತಂದು
ಕುಳಿತ ರಾಮ ಲಕ್ಷ್ಮಣರ ನೋಡಿ ಕಣ್ತುಂಬ ನೀರು ತಂದು

ಅಕ್ಕನಂತೆ ಶಬರಿಯು ಪರಮಾತ್ಮನನ್ನು ಅರಸುತ್ತ ಅಲೆಯಲಿಲ್ಲ, ಕಾದಳು. ಬೊಚ್ಚುಬಾಯಿಯ ಬಾತುಕೋಳಿಯಂತೆ ಕಾಲವನ್ನು ಹಿಂದಕ್ಕೆ ತಳ್ಳುತ್ತ, ಪಾದವನ್ನೆತ್ತಿ ಬೆರಳೆಣಿಸುವ ಕೊಕ್ಕರೆಯಂತೆ ಬೆರಳುಗಳಲಿ ಮುಂದಿನ ದಿನಗಳನ್ನೆಣಿಸುತ್ತ… ಕಾದು ಕಾದು ಕಾಯ ಮಾಗಿ ಮಾಗಿ ಆತ್ಮ ಹಣ್ಣಾದಳು. ಕೊನೆಗೂ ನೀಲ ನಿರಾಕಾರಕ್ಕೊಂದು ಆಕಾರ ಬಂದಂತೆ ಅವನೇ ಇವಳನ್ನು ಹುಡುಕುತ್ತ ಬಳಿ ಬಂದ, ಅವಳೆದೆಯ ಓಂಕಾರಕ್ಕೆ ಓಗೊಟ್ಟ ಮನುಷ್ಯ ರೂಪದಲ್ಲೇ. ಅಳಿಲಂತೆ ಕಚ್ಚಿ ಎಂಜಲಲಿ ತೊಯ್ದ ಸಿಹಿ ಬುಗರಿಹಣ್ಣುಗಳನ್ನು ತಿನ್ನಿಸಿದಳು, ದಿವ್ಯ ದೇವಫ‌ಲವನ್ನೇ ಪಡೆದಳು. ಅಮೃತಫ‌ಲವಾದಳು.

ಕಾತ್ಯಾಯಿನಿ ಕುಂಜಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next