Advertisement

ಮುಂಗೋಳಿ ಕವಿ ಮುದ್ದಣ ಅಂಚೆ ಚೀಟಿ ಬಡುಗಡೆ

06:15 AM Nov 02, 2017 | |

ಬೆಂಗಳೂರು: ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕೊಡುಗೆ ನೀಡಿದೆ. ಹಳಗನ್ನಡ ಕಾವ್ಯಪರಂಪರೆಯ ಕೊನೆಯ ಕೊಂಡಿ ಹಾಗೂ ಹೊಸಗನ್ನಡದ “ಮುಂಗೋಳಿ’ ಕವಿ ಮುದ್ದಣ ಅವರ ಅಂಚೆಚೀಟಿ ಬಿಡುಗಡೆ ಮಾಡಿದೆ.

Advertisement

ಕವಿ ಮುದ್ದಣ ಅವರ ಜತೆಗೆ ನೆರೆಯ ಆಂಧ್ರಪ್ರದೇಶದ ಆದಿಕವಿ ನನ್ನಯ ಮತ್ತು ದ್ರಾಕ್ಷಾರಾಮಂ ಭೀಮೇಶ್ವರ ದೇವಸ್ಥಾನದ ಚಿತ್ರಗಳಿರುವ ಅಂಚೆಚೀಟಿಗಳನ್ನೂ ಹೊರತಂದಿದೆ. ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್‌ ಈ ನೂತನ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಈ ಮೂಲಕ ಮುದ್ದಣ ಅವರಿಗೆ ರಾಷ್ಟ್ರಮನ್ನಣೆ ದೊರಕಿತು.

ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕನ್ನಡ ರಾಜ್ಯೋತ್ಸವದಂದು ಕವಿ ಮುದ್ದಣ ಅವರ ಸ್ಮರಣಾರ್ಥ ಅಂಚೆಚೀಟಿಗಳನ್ನು ಹೊರತರುವ ಮೂಲಕ ಕೇಂದ್ರ ಸರ್ಕಾರವು ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೊಂದು ಅಪರೂಪದ ಕ್ಷಣ. ಅಷ್ಟೇ ಅಲ್ಲ, ಇದೇ ಸಂದರ್ಭದಲ್ಲಿ ನೆರೆಯ ಆಂಧ್ರಪ್ರದೇಶ ಆದಿಕವಿ ನನ್ನಯ ಮತ್ತು ದ್ರಾಕ್ಷಾರಾಮಂ ಭೀಮೇಶ್ವರ ದೇವಸ್ಥಾನದ ಅಂಚೆಚೀಟಿ ಬಿಡುಗಡೆ ಮಾಡಿರುವುದು ಸಾಮರಸ್ಯದ ಸಂಕೇತ ಎಂದು ಬಣ್ಣಿಸಿದರು.

2001ರಿಂದಲೂ ಮುದ್ದಣ ಅವರ ಸ್ಮರಣಾರ್ಥ ಅಂಚೆಚೀಟಿ ಹೊರತರಬೇಕು ಎಂದು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಈಗ ಆ ಪ್ರಯತ್ನಕ್ಕೆ ಫ‌ಲ ಸಿಕ್ಕಿದೆ. ಮುಂದಿನ ಹಂತದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮುದ್ದಣ ಅವರ ಅಧ್ಯಯನ ಪೀಠ ಸ್ಥಾಪಿಸಲು ಹೋರಾಟ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಪ್ರಯತ್ನಗಳು ನಡೆದಿದ್ದರೂ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

ಮುದ್ದಣ ಅವರ ಅನೇಕ ಕೈಬರಹಗಳು ನಾಶವಾಗಿವೆ. ಲಭಿಸಿದಷ್ಟು ಬರಹಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.

Advertisement

ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ಕವಿಗಳಾದ ಮುದ್ದಣ ಮತ್ತು ನನ್ನಯ ಅವರ ಅಂಚೆಚೀಟಿಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿರುವುದು ಅಪರೂಪದ ಸಂಗತಿ. ಇದರಿಂದ ಎರಡೂ ರಾಜ್ಯಗಳ ಕವಿಗಳ ಮಹತ್ವವನ್ನು ಜನ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವ ಸಾಧಕರ ಅಂಚೆಚೀಟಿಗಳನ್ನು ಅಂಚೆ ಇಲಾಖೆ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೋ, ಪೋಸ್ಟ್‌ ಮಾಸ್ಟರ್‌ ಜನರಲ್‌ (ದಕ್ಷಿಣ ಕರ್ನಾಟಕ ವಲಯ) ರಾಜೇಂದ್ರ ಕುಮಾರ್‌, ಕವಿ ಮುದ್ದಣ ಟ್ರಸ್ಟ್‌ನ ಮುಖ್ಯಸ್ಥ ನಂದಳಿಕೆ ಬಾಲಚಂದ್ರ ರಾವ್‌ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುದ್ದಣ ಅವರ ಮೊಮ್ಮಗ ನಂದಳಿಕೆ ಸೀತಾರಾಂ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next