ಅದೆಂಥ ಯುದ್ಧ! ಆದರೂ ನಾನು ಸಿದ್ಧ!
ಆಕೆಯನ್ನು ಎದುರುಗೊಳ್ಳಲು ನಾನು ಯೋಜನೆ ಹಾಕಿರಲಿಲ್ಲ,
ಆ ತಿರುವಿನಲ್ಲಿ ನಾವಿಬ್ಬರೂ ಮುಖಾಮುಖೀಯಾದೇವೆಂದು ತಿಳಿದಿರಲಿಲ್ಲ.
ಅಲ್ಲಿದ್ದಳಾಕೆ, ಮೃತ್ಯುದೇವತೆ!
ನನ್ನ ದಾರಿಗಡ್ಡವಾಗಿ, ನನ್ನ ಬದುಕಿಗಿಂತ ಎತ್ತರವಾಗಿ.
ಹೀಗೆ ಅಕಾಸ್ಮಾತ್ತಾಗಿ ಎದುರುಗೊಂಡು ಕಾಳಗಕ್ಕೆ ಕರೆಯುವುದು ಸರಿಯೇ?
ಅದೂ ಎದುರಾಳಿ ನಿಶ್ಶಸ್ತ್ರನಾಗಿದ್ದಾಗ, ಯುದ್ಧದ ಯೋಚನೆಯೇ ಇಲ್ಲದಿರುವಾಗ?
ಹೀಗೆ ಧುತ್ತನೆ ಎದುರಾಗಿ, ಸಮಯ ಕೊಡದೆ ಕೆಳಬೀಳಿಸುವುದು ಜಾಣತನವಲ್ಲ.
ಧೈರ್ಯವಿದ್ದರೆ ಬರಬೇಕು, ಮೊದಲೇ ಸೂಚನೆ ಕೊಟ್ಟು.
ಪರೀಕ್ಷಿಸಿ, ಎದುರೆದುರಾಗಿ ನಿಂತು ದಿಟ್ಟಿಸಿ.
ಬದುಕನ್ನು ಪೂರ್ತಿ ಬಾಳಿರುವ ನನಗೇತರ ಚಿಂತೆ, ಭಯ, ವಿಹ್ವಲತೆ?
ಎದುರಿಸುತ್ತೇನೆ ಎದುರಾಳಿಯಂತೆಯೇ!
Advertisement
– ಇದು 1988ರಲ್ಲಿ, ಅಂದರೆ ಇಂದಿಗೆ 30 ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರು ತೀವ್ರ ಅಸ್ವಸ್ಥರಾಗಿ ಅಮೆರಿಕದ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ರೋಗಿಯಾಗಿ ಮಲಗಿದ್ದಾಗ ಬರೆದಿದ್ದ ಕವಿತೆ !.
ಅಟಲ್ ಬಿಹಾರಿ ವಾಜಪೇಯಿ, ಕೇವಲ ರಾಜಕಾರಣಿ, ಮುತ್ಸದ್ದಿ, ರಾಜತಾಂತ್ರಿಕ ಮಾತ್ರವೇ ಆಗಿರಲಿಲ್ಲ. ಅವರು ಒಬ್ಬ ಸಹೃದಯ ಕವಿಯೂ ಆಗಿದ್ದರು. ಜನಪ್ರಿಯತೆಯ ತುತ್ತತುದಿಯಲ್ಲಿ ಮಿಂದೇಳುತ್ತಿರುವಾಗಲೂ ಅಟಲ್‌ಜಿ ತನ್ನ ದಿನನಿತ್ಯದ ಬ್ಯುಸಿ ಕೆಲಸಕಾರ್ಯಗಳ ನಡುವೆ ಒಂದಷ್ಟು ಹೊತ್ತು ಮಾಡಿಕೊಂಡು ಕವಿತೆ ಬರೆಯುತ್ತಿದ್ದರು.
ಮೇರೇ ಪ್ರಭು!
ಮುಝೆ ಇತ್ನಿ ಊಂಚಾಯಿ ಕಭಿ ಮತ್ ದೇನಾ,
ಗೈರೋನ್ ಕೋ ಗಲೇ ನ ಲಗಾ ಸಕೂಂ
ಇತ್ನಿà ರುಖಾನಿ ಕಭೀ ಮತ್ ದೇನಾ!
(ಪ್ರಭು, ಇಷ್ಟೊಂದು ಎತ್ತರಕೆ ಏರಿಸಬೇಡ ನನ್ನ!
ಅಪರಿಚಿತರ ಅಪ್ಪಿಕೊಳ್ಳಲು ಆಗದಷ್ಟು
ಅಹಂಕಾರದ ಎತ್ತರಕ್ಕೆ ಏರಿಸಬೇಡ ನನ್ನ!) – ಎಂದು ಅವರು ಜನಪ್ರಿಯತೆಯ ಮೇಲೆಯೂ ಕವಿತೆ ಬರೆದದ್ದುಂಟು! ಅಟಲ್‌ಜೀ ಅವರದ್ದು ಏಳುಬೀಳಿನ ರಾಜಕೀಯ ಯಾತ್ರೆ. 11 ಸಲ ಸಂಸದರಾಗಿ, ಎರಡು ಸಲ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅಟಲ್‌ಜಿ 1984ರಲ್ಲಿ ತನ್ನ ಹುಟ್ಟೂರಾದ ಗ್ವಾಲಿಯರ್‌ನಲ್ಲಿ ಚುನಾವಣೆ ಸೋತರು. ಆಗ ಅವರು ಬರೆದದ್ದು: ಯಹ್ ಹಾರ್ ಏಕ್ ವಿರಾಮ್ ಹೈ, ಜೀವನ್ ಮಹಾಸಂಗ್ರಾಮ್ ಹೈ! ಅಂದರೆ, ಸೋಲು ಕೂಡ ಜೀವನದ ನಡುವೆ ಸಿಗುವ ಒಂದು ಪುಟ್ಟ ವಿರಾಮ; ಜೀವನವೆಂಬ ಮಹಾಸಂಗ್ರಾಮದಲ್ಲಿ ಇಂಥ ಪುಟ್ಟ ಪುಟ್ಟ ವಿರಾಮಗಳು ಸಿಗುವುದು ಒಳ್ಳೆಯದು! ಬೇಟೆಯಾಡುವ ಹುಲಿ ಚಂಗನೆ ನೆಗೆಯುವುದಕ್ಕೆ ಮೊದಲು ಒಂದೆರಡು ಹೆಜ್ಜೆಗಳನ್ನು ಹಿಂದಿಡುವಂತೆ, ಸೋಲಿನ ಕ್ಷಣಗಳನ್ನು ಅಟಲ್‌ಜಿ ಆತ್ಮವಿಮರ್ಶೆಗೆ, ಕವಿತೆ ಬರೆಯಲು ಬಳಸುತ್ತಿದ್ದರು. ಎಮರ್ಜೆನ್ಸಿಯ ಸಮಯದಲ್ಲಿ 19 ತಿಂಗಳ ಕಾಲ ಅವರು ಜೈಲಿನಲ್ಲಿದ್ದಾಗ ಕೂಡ ಸಮಯ ಕಳೆಯಲು ಅವರು ಆಯ್ದುಕೊಂಡದ್ದು ಕವಿತೆಗಳನ್ನೇ. ಆ ಸಮಯದಲ್ಲೇ ಅವರ ಮೇರೀ ಇಕ್ಯಾವನ್ ಕವಿತಾಯೇ (ನನ್ನ ಐವತ್ತೂಂದು ಕವಿತೆಗಳು) ಪುಸ್ತಕದ ಬಹಳಷ್ಟು ಕವಿತೆಗಳು ರೂಪುಪಡೆದವು.
ದೋ ದಿನ್ ಮಿಲೇ ಉಧಾರ್ ಮೇ
ಘಾತೊನ್ ಕೆ ವ್ಯಾಪಾರ್ ಮೇ
ಕ್ಷಣ್ ಕ್ಷಣ್ ಕಾ ಹಿಸಾಬ್ ಲೂn
ಯಾ ನಿಧಿ ಶೇಷ್ ಲಟಾಊ ಮೈ?
ರಾಹ್ ಕೌನ್ ಸಿ ಜಾವೂನ್ ಮೈ?
(ಸಿಕ್ಕಿತೆರಡು ದಿನಗಳು ಬಹುಕಷ್ಟದಲ್ಲಿ,
ಏನು ಮಾಡಲಿ ಅವನು, ಅಳೆಯಲೇ ಒಂದೊಂದು ಕ್ಷಣವನ್ನೂ ಮುತ್ತಿನಂತೆ,
ಅಥವಾ ಕಳೆದುಬಿಡಲೇ ಯಾವ ಲೆಕ್ಕವಿಡದೆ ಉದಾಸನಂತೆ?
ಯಾವ ದಾರಿಯನ್ನು ಆರಿಸಿಕೊಳ್ಳಲಿ, ಗೊಂದಲದಲ್ಲಿರುವೆ!) ಈ ಸಂದಿಗ್ಧಕ್ಕೆ ಉತ್ತರವೆಂಬಂತೆ ಅಟಲ್‌ಜಿಯವರ ಕವಿತೆಯ ಎರಡು ಸಾಲುಗಳು ಬರುತ್ತವೆ:
ಕೊ ನಾ ಮೈ ಕ್ಷಣ್ ಕ್ಷಣ ಕೋ ಜೀಯೂn?
ಕಣ ಕಣ ಮೇ ಬಿಖರೇ ಸೌಂದರ್ಯ ಕೋ ಪೀಯೂn?
-ಅಂದರೆ ಒಂದೊಂದು ಕ್ಷಣವನ್ನೂ ಅಳೆದು ತೂಗಿ ಜಿಪುಣನಂತೆ ದಿನಗಳನ್ನು ಕಳೆಯುವುದರ ಬದಲಾಗಿ ಒಂದೊಂದು ಕ್ಷಣವನ್ನೂ ಅದರ ಸಂಪೂರ್ಣ ಸುಖವನ್ನು ಅನುಭವಿಸುತ್ತ ಕಳೆದುಬಿಡಬೇಕು ಎಂಬ ತೀರ್ಮಾನಕ್ಕೆ ಕವಿ ಬರುತ್ತಾರೆ. ಪ್ರತಿಕ್ಷಣದಲ್ಲೂ ಅನುಭವ ಇದೆ, ಸುಖ ಇದೆ, ಸೌಂದರ್ಯ ಇದೆ. ಹಾಗಾಗಿ ಪ್ರತಿ ಕ್ಷಣವನ್ನೂ ಅತ್ಯಂತ ಅರ್ಥಪೂರ್ಣವಾಗಿ ಕಳೆದುಬಿಡಬೇಕು; ಜೀವನದ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಬೇಕು- ಎಂಬ ಆಶಾವಾದ ಕವಿ ಅಟಲ್‌ಜೀಯವರದ್ದಾಗುತ್ತದೆ.
ತನ್ನ ಕವಿಜೀವನದ ಉತ್ತರಾರ್ಧವನ್ನು ಅಟಲ್‌ಜೀ ದೇಶಪ್ರೇಮವನ್ನು ಉಕ್ಕಿಸುವಂಥ ಕವಿತೆಗಳನ್ನು ಬರೆಯುವುದಕ್ಕೆ ಮೀಸಲಿಟ್ಟರು. ಪಾಕಿಸ್ತಾನದ ಒಂದೊಂದು ಕೆಣಕುವಿಕೆಗೂ ಅಟಲ್‌ಜೀಯವರ ಪೆನ್ನು ಕವಿತೆಯ ಮೂಲಕ ಉತ್ತರ ಕೊಟ್ಟಿತು.
ಸಹಿಸುವಷ್ಟು ಸಹಿಸಿದ್ದೇವೆ, ಇನ್ನೇನಿದ್ದರೂ ನಮ್ಮ ನಡುವೆ ಕಾಳಗವೇ!
ಬಾಗುವಷ್ಟು ಬಗ್ಗಿದ್ದೇವೆ. ಈಗ ಮತ್ತೆ ಬಾಗಲಾಗದು, ಮುರಿದೇವೇನೋ, ಆದರೆ ತಲೆಬಾಗೆವು
ಎಂಬಂಥ ಕ್ರಾಂತಿಕಾರಿ ಕವಿತೆಗಳನ್ನು ಅಟಲ್‌ಜೀ ಹೆಚ್ಚು ಹೆಚ್ಚು ಬರೆದರು.
ಅವರ ಒಂದು ಕವಿತೆಯಂತೂ,
ವಿಕೋಪಗಳು ಎದುರಾಗಲಿ!
ಪ್ರಳಯವೇ ನಡೆದುಹೋಗಲಿ!
ನಮ್ಮ ಪಾದಗಳ ಕೆಳಗೆ ಕೆಂಡದ ಹಾಸಿಗೆಯೇ ಹಾಸಲಿ!
ಅಥವಾ ನಮ್ಮ ಮೇಲೆ ಬೆಂಕಿಯ ಮಳೆಗರೆಯಲಿ!
ಅಂಥ ಬೆಂಕಿಯನ್ನೂ ಕೈಯಲ್ಲಿ ಹಿಡಿದು,
ನಗುತ್ತ, ಸುಡುತ್ತ ನಡೆಯೋಣ ನಾವೆಲ್ಲರೂ ಒಟ್ಟಿಗೆ!
ಆದರೆ ನಡಿಗೆ ನಿಲ್ಲದಿರಲಿ, ಹೆಜ್ಜೆ ತಪ್ಪದಿರಲಿ!
– ಎನ್ನುತ್ತ ಕ್ರಾಂತಿಕಾರಿಗಳ ಘೋಷಗೀತೆಯೇ ಆಗುತ್ತದೆ.
ಅಟಲ್‌ಜೀಯವರ ರಾಷ್ಟ್ರಪ್ರೇಮದ ಉಜ್ವಲತೆಯನ್ನು ಬಿಂಬಿಸುವ ಒಂದು ಕವಿತೆಯಲ್ಲಿ ಬರುವ ಒಂದು ಸಾಲು: ನಮ್ಮ ಜೀವನ ತೀರಿದ ಮೇಲೆ ಸಂಸ್ಕಾರ ಮಾಡಿ, ಮೃತದೇಹದ ಅಸ್ಥಿಯನ್ನು ಗಂಗೆಯಲ್ಲಿ ಚೆಲ್ಲಿದರೂ, ಆ ಅಸ್ಥಿಯನ್ನು ಕಿವಿಗಿಟ್ಟರೆ ನಿಮಗೆ ಅದರಲ್ಲಿ ಕೇಳಿಸಬಹುದು: ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!
Related Articles
Advertisement
ಬ್ರಹ್ಮಪುತ್ರ