Advertisement

ಕವಿ ಚೆನ್ನ ವೀರ ಕಣವಿ ಬರಹ ಸ್ಪೂರ್ತಿದಾಯಕ: ಸಿದ್ದಲಿಂಗ

11:52 AM Feb 26, 2022 | Team Udayavani |

ಶಹಾಬಾದ: ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದೇ ಪ್ರಸಿದ್ಧರಾಗಿದ್ದ ಚೆನ್ನವೀರ ಕಣವಿ ಬರವಣಿಗೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಹೇಳಿದರು.

Advertisement

ಜಿ.ಬಿ.ಸಂಗೀತಾ ಕಲಾ ಸಂಸ್ಥೆಯಿಂದ ಜಿ.ಬಿ.ಸಂಗೀತ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಡೋಜ ಚನ್ನವೀರ ಕಣವಿ ಅವರ ಭಾವಪೂರ್ಣ ಶ್ರದ್ಧಾಂಜಲಿ, ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚೆನ್ನವೀರ ಕಣವಿ ಅವರಿಗೆ ಬಾಲ್ಯದಿಂದಲೂ ಸಾಹಿತ್ಯದ ಮೇಲೆ ಅಪಾರ ಒಲವು ಇತ್ತು. ಕಾವ್ಯ, ವಚನಗಳಲ್ಲಿ ಅತೀವ ಆಸಕ್ತಿಯಿತ್ತು. ರಾಷ್ಟ್ರ ಕವಿ ಗೌರವ ಚೆನ್ನವೀರ ಕಣವಿ ಅವರಿಗೆ ಸಲ್ಲಬೇಕೆಂಬುದು ನಾಡಿನ ಹಲವಾರು ಸಾಹಿತ್ಯಾಸಕ್ತರ ಒತ್ತಾಸೆಯಾಗಿತ್ತು. ಇತ್ತೀಚೆಗೆ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಷಿ ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಕಣವಿ ಅವರನ್ನು ಕಳೆದುಕೊಂಡೆವು ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಮರಣೋತ್ತರವಾಗಿ ಚೆನ್ನವೀರ ಕಣವಿ ಅವರಿಗೆ ರಾಷ್ಟ್ರಕವಿ ಗೌರವ ನೀಡಬೇಕು ಎಂದು ಒತ್ತಾಯಿಸಿದರು. ಉಪನ್ಯಾಸಕ ರಾಮಣ್ಣ ಇಬ್ರಾಹಿಂಪುರೆ, ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಚೆನ್ನವೀರ ಕಣವಿ ಸುಮಾರು 36ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 16 ಕವನ ಸಂಕಲನ, 5 ವಿಮರ್ಶಾ ಗ್ರಂಥ, ಹಕ್ಕಿ ಪುಕ್ಕ ಹಾಗೂ ಚಿಣ್ಣರ ಲೋಕವ ತೆರೆಯೋಣ ಎನ್ನುವ ಎರಡು ಮಕ್ಕಳ ಪುಸ್ತಕ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ರಚಿಸಿ, ಕನ್ನಡ ಸಾಹಿತ್ಯ ಪ್ರೇಮಿಗಳು, ಸಾಹಿತ್ಯಾಸಕ್ತರನ್ನು ರಂಜಿಸಿದ್ದಾರೆ ಎಂದರು.

ನಗರಸಭೆ ಸದಸ್ಯ ಶರಣು ವಸ್ತ್ರದ್‌ ಮಾತನಾಡಿ, ಕಣವಿ ಅವರ ಕವಿತೆಯ ಸಾಲುಗಳಲ್ಲಿ ಬೇಂದ್ರೆ ಅವರಂತೆಯೇ ಮಳೆಗಾಲವು ಮೇಲಿಂದ ಮೇಲೆ ಕಾಣಿಸಿಕೊಂಡಿದ್ದಿದೆ. ಹೀಗಾಗಿ ಜಿ.ಎಸ್‌. ಶಿವರುದ್ರಪ್ಪ ಕಣವಿ ಅವರನ್ನುಮಳೆಗಾಲದ ಕವಿ ಎಂದು ಬಣ್ಣಿಸಿದ್ದಾರೆ. ಅವರ ಸಾಹಿತ್ಯ, ಬರವಣಿಗೆ, ಕಾವ್ಯ ಮತ್ತು ಅವರ ಅಚ್ಚುಮೆಚ್ಚಿನ ಸಾಂಗತ್ಯ ಪ್ರಕಾರವು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮೈಲಿಗಲ್ಲಾಗಿ ಉಳಿಯಲಿದೆ ಎಂದರು.

Advertisement

ಜಿ.ಬಿ.ಸಂಗೀತ ಶಾಲೆಯ ಕಾರ್ಯದರ್ಶಿ ಶಾಂತಪ್ಪ ಹಡಪದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದ ಮೌನೇಶ್ವರ ಸೊನಾರ ಕಣವಿ ಅವರ ಸಂರಚಿತ ಭಾವಗೀತೆಗಳನ್ನು ಹಾಡಿದರು. ತಬಲಾ ಕಲಾವಿದರಾದ ನಾಗಭೂಷಣ ಸ್ಥಾವರಮಠ, ಲೋಕೇಶ ಪತ್ತಾರ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next