ನವದೆಹಲಿ: ಫೇ. 6ರಂದು ನಡೆದ ಭೀಕರ ಭೂಕಂಪದಿಂದ ನಲುಗಿಹೋಗಿದ್ದ ಟರ್ಕಿಗೆ ʻಆಪರೇಷನ್ ದೋಸ್ತ್ʼ ಹೆಸರಿನಲ್ಲಿ ಭಾರತ ತನ್ನ ಸಹಾಯಹಸ್ತ ಚಾಚಿತ್ತು. 2015ರಲ್ಲಿ ನೆರೆರಾಷ್ಟ್ರ ನೇಪಾಳ ಅಲ್ಲಿ ಸಂಭವಿಸಿದ ಯಮರೂಪಿ ಭೂಕಂಪದಿಂದಾಗಿ ಕಂಗೆಟ್ಟಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಭಾರತದ ಎನ್‌ಡಿಆರ್‌ಎಫ್ ತಂಡವನ್ನು ಭಾರತದ ಹೊರಗಿನ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿತ್ತು.ಇದೀಗ ಭಾರತ ತನ್ನ ಎನ್‌ಡಿಆರ್‌ಎಫ್ ತಂಡದ ಜೊತೆಗೆ ಶ್ವಾನದಳವನ್ನೂ, ವೈದ್ಯಕೀಯ ನೆರವನ್ನೂ ಟರ್ಕಿಗೆ ಕಳುಹಿಸಿಕೊಟ್ಟು ಭಾರತ ಮಾನವೀಯತೆಗೇ ತನ್ನ ಮೊದಲ ಆದ್ಯತೆ ಎಂಬುದನ್ನು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಸಾಬೀತು ಪಡಿಸಿದೆ. ಈ ಶ್ರೇಷ್ಠ ಕಾರ್ಯದಲ್ಲಿ ಭಾಗಿಯಾದ ಸೇನಾ ಸಿಬ್ಬಂದಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ ತಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
NDRF ಡೈರೆಕ್ಟರ್ ಜನರಲ್ ಅತುಲ್ ಕರ್ವಾಲ್ ಮೊದಲ್ಗೊಂಡು ಟರ್ಕಿಗೆ ತೆರಳಿದ್ದ 151 ಸಿಬ್ಬಂದಿಗಳೂ ಸೇರಿ ಇತರೆ ಅಧಿಕಾರಿಗಳೂ ಸಭೆಯಲ್ಲಿ ತಮ್ಮ ತಮ್ಮ ಅನುಭವವನ್ನು ಪ್ರಧಾನಿ ಮೋದಿ ಜೊತೆಗೆ ಹಂಚಿಕೊಂಡಿದ್ಧಾರೆ.
ಮೋದಿ ಅವರೂ 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದ ವೇಳೆ ತಾವು ಕಾರ್ಯಕರ್ತನಾಗಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರ ಅನುಭವವನ್ನು ಹಂಚಿಕೊಂಡ್ರು. ʻಗುಜರಾತ್ ಭೂಕಂಪದ ವೇಳೆ ಭುಜ್‌ನಲ್ಲಿ ಆಸ್ಪತ್ರಗಳೂ ತುಂಬಿ ತುಳುಕುತ್ತಿದ್ದವು. ರಕ್ಷಣಾ ಕಾರ್ಯಾಚರಣೆಯ ಕಷ್ಟದ ಬಗ್ಗೆ ನನಗೂ ತಿಳಿದಿದೆ. ಅದಕ್ಕೆ ಸಾಕಷ್ಟು ಧೈರ್ಯವೂ ಬೇಕಾಗುತ್ತದೆ. ಇದಿಕ್ಕಾಗೇ ನಿಮಗೆ ಸೆಲ್ಯೂಟ್. ದೇಶವೇ ಇಂದು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆʼ . ಎಂದು ಪ್ರಧಾನಿ ಮೋದಿ ಹೇಳಿದರು.
ಸಿಬ್ಬಂದಿಗಳು ಟರ್ಕಿಗೆ ತೆರಳಿ ಕಲಿತಿದ್ದನ್ನು ದಾಖಲಿಸುವಂತೆ ಎನ್‌ಡಿಆರ್‌ಎಫ್ ಅಧಿಕಾರಿಗಳಿಗೆ ಪ್ರಧಾನಿ ತಿಳಿಸಿದ್ದಾರೆ. ಅಲ್ಲದೇ ಈ ಮಾತುಕತೆ ವೇಳೆ ಬೇರೆ ದೇಶಗಳ ರಕ್ಷಣಾ ಕಾರ್ಯದ ಬಗ್ಗೆ, ಅವರು ಉಪಯೋಗಿಸುತ್ತಿದ್ದ ರಕ್ಷಣಾ ಸಲಕರಣೆಗಳ ಬಗ್ಗೆಯೂ ಪ್ರಧಾನಿ ಮಾಹಿತಿ ಕೇಳಿದ್ದಾರೆ.
ʻಪ್ರಪಂಚದ ಯಾವುದೇ ಕಡೆಗೆ ತಿರಂಗಾ ತಲುಪಿದಾಗ ಭಾರತ ತಮ್ಮನ್ನು ಮೇಲೆತ್ತಲು ಬಂದಿದೆ ಎಂದೇ ಜನ ಭಾವಿಸುವಂತಾಗಿದೆ. ಅದು ಭೂಕಂಪ, ಪ್ರವಾಹ, ಸೈಕ್ಲೋನ್ ಏನೇ ಆಗಿರಲಿ ಎನ್‌ಡಿಆರ್‌ಎಫ್ ತಯಾರಿರುತ್ತದೆ. ಇದು ದೊಡ್ಡ ಸಾಧನೆ. ನಾವು ಇಲ್ಲಿಗೇ ನಿಲುವವರಲ್ಲʼ ಎಂದು ಪ್ರಧಾನಿ ಹೇಳಿದ್ಧಾರೆ.
ʻಮಾನವೀಯತೆಗೆಯೇ ನಮ್ಮ ಮೊದಲ ಆದ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯಾವುದೇ ದೇಶ ಕಷ್ಟದಲ್ಲಿದ್ದರೂ ಭಾರತ ಅರೆಕ್ಷಣದಲ್ಲಿ ಸಹಾಯ ಹಸ್ತ ಚಾಚುತ್ತದೆ. ತಾಯಿಯೊಬ್ಬಳು ನಿಮ್ಮನ್ನು ಹರಸುವ, ಪುಟ್ಟ ಬಾಲಕಿಯೊಬ್ಬಳನ್ನು ನೀವು ರಕ್ಷಿಸುವ ದೃಶ್ಯಗಳನ್ನು ಇಡೀ ಭಾರತ ನೋಡಿದೆ. ನಿಮ್ಮ ಕಾಯಕ ಮತ್ತು ಸೇವೆ ನಾವು ಹೆಮ್ಮ ಪಡುವಂತೆ ಮಾಡಿದೆʼಎಂದರು.
ಅಷ್ಟೇ ಅಲ್ಲದೇ ಟರ್ಕಿಗೆ ತೆರಳಿದ್ದ ಭಾರತದ ಶ್ವಾನದಳದ ಬಗ್ಗೆಯೂ ಪ್ರಧಾನಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ನಮ್ಮ ಶ್ವಾನದಳ 6 ಮತ್ತು 8 ರ ಹರೆಯದ ಪುಟ್ಟ ಬಾಲಕಿಯರನ್ನು ಜೀವಂತವಾಗಿ ರಕ್ಷಿಸಿದ್ದು ಅಭೂತಪೂರ್ವ ಎಂದು ಹೇಳಿದರು. ಈ ಮಾತುಕತೆಯ ವೀಡಿಯೋ ತುಣುಕೊಂದನ್ನೂ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.