Advertisement
ಪಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ಮೂರು ಕಂಪನಿಗಳು ಮೂರು ತಂತ್ರಜ್ಞಾನಗಳನ್ನು ಬಿಬಿಎಂಪಿ ಮುಂದಿಟ್ಟಿದ್ದವು. ಈ ಸಂಸ್ಥೆಗಳ ಪ್ರಸ್ತಾವನೆಯನ್ನು ಪಾಲಿಕೆಯು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರ ಸಮಿತಿ ಮುಂದೆ ಮಂಡಿಸಿತ್ತು.
Related Articles
Advertisement
ಇದರಿಂದ ಐಟಿ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಚಾರದಟ್ಟಣೆ ಗೋಳು ತಗ್ಗಲಿದೆ. ಮೆಟ್ರೋದಲ್ಲಿ ಟ್ರಿನಿಟಿ ವೃತ್ತಕ್ಕೆ ಬಂದಿಳಿಯುವ ಉದ್ಯೋಗಿಗಳು, ಪಾಡ್ ಟ್ಯಾಕ್ಸಿ ಏರಿ ನೇರವಾಗಿ ಕಂಪನಿ ಬಾಗಿಲಲ್ಲೇ ಇಳಿಯಬಹುದು! ಪ್ರತಿ ಕಿ.ಮೀ. ಪಿಆರ್‌ಟಿಎಸ್ ನಿರ್ಮಾಣಕ್ಕೆ 25 ಕೋಟಿ ರೂ. ವೆಚ್ಚ ಆಗುತ್ತದೆ.
ಆದರೆ, ಈ ಯೋಜನೆ ಅನುಷ್ಠಾನದಲ್ಲಿ ಬಿಬಿಎಂಪಿಯಿಂದ ಯಾವುದೇ ಹೂಡಿಕೆ ಇರುವುದಿಲ್ಲ. ಬದಲಿಗೆ ಪಾಲಿಕೆಗೆ ಈ ಮಾದರಿಯ ಟ್ಯಾಕ್ಸಿ ಓಡಿಸುವ ಸಂಬಂಧ ಪರವಾನಗಿ ಶುಲ್ಕ ಹಾಗೂ ಕಾರ್ಯಾಚರಣೆಯಿಂದ ಬರುವ ಆದಾಯದಲ್ಲಿ ಇಂತಿಷ್ಟು ಲಾಭಾಂಶ ಬರಲಿದೆ. ಇದಕ್ಕೆ ಪ್ರತಿಯಾಗಿ ಮಾರ್ಗ ನಿರ್ಮಾಣಕ್ಕೆ ಪಾಲಿಕೆಯು ವರ್ತೂರು ಕೋಡಿ-ಟ್ರಿನಿಟಿ ವೃತ್ತದುದ್ದಕ್ಕೂ ರಸ್ತೆ ಮಧ್ಯೆ 4.5ರಿಂದ 5.5 ಮೀ. ಜಾಗವನ್ನು ನೀಡಬೇಕಾಗುತ್ತದೆ.
ಕನಿಷ್ಠ ಸಾವಿರ ಟ್ರಿಪ್ ಗುರಿಇನ್ನು “ಪೀಕ್ ಅವರ್’ನಲ್ಲಿ ಈ 20 ಕಿ.ಮೀ. ಮಾರ್ಗ ಕ್ರಮಿಸಲು ಕನಿಷ್ಠ ಎರಡು ತಾಸು ಬೇಕಾಗುತ್ತದೆ. ಆದರೆ, ಪಿಆರ್‌ಟಿಎಸ್ ವಾಹನದಲ್ಲಿ ಕೆಲವೇ ನಿಮಿಷಗಳು ಸಾಕು. ಗಂಟೆಗೆ 60 ಕಿ.ಮೀ. ವೇಗದಲ್ಲಿ ಈ ಪಾಡ್ ಟ್ಯಾಕ್ಸಿಗಳು ಸಂಚರಿಸುತ್ತವೆ. ಒಂದು ಟ್ಯಾಕ್ಸಿಯಲ್ಲಿ ಗರಿಷ್ಠ 6 ಜನ ಪ್ರಯಾಣಿಸಬಹುದಾಗಿದ್ದು, ನಿತ್ಯ ಕನಿಷ್ಠ ಸಾವಿರ ಟ್ರಿಪ್‌ಗ್ಳನ್ನು ಕಾರ್ಯಾಚರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಮುಖ್ಯ ಎಂಜಿನಿಯರೊಬ್ಬರು ಮಾಹಿತಿ ನೀಡಿದರು. ಟೆಂಡರ್ ಕರೆದ ನಂತರ 30 ದಿನಗಳು ಕಾದುನೋಡಲಾಗುವುದು. ನಂತರ ಟೆಂಡರ್‌ಗೆ ಸರ್ಕಾರದಿಂದ ಅನುಮೋದನೆ ಪಡೆದು ಕಾರ್ಯಾದೇಶ ನೀಡಲಾಗುವುದು. ತದನಂತರ 18ರಿಂದ 20 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು. ವೈಟ್‌ಫೀಲ್ಡ್ ಯಾಕೆ?
ನಗರದ ಅತ್ಯಧಿಕ ವಾಹನದಟ್ಟಣೆ, ಜನದಟ್ಟಣೆ ಇರುವ ಪ್ರದೇಶ ವೈಟ್‌ಫೀಲ್ಡ್. ನಿತ್ಯ ಪೀಕ್ ಅವರ್‌ನಲ್ಲಿ ಜನ ಅಲ್ಲಿ ಪರದಾಡುತ್ತಾರೆ. ಜತೆಗೆ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವುದರಿಂದ, ಇಲ್ಲಿ ಬಳಕೆ ಪ್ರಮಾಣ ಬೇರೆಡೆಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್-ಟ್ರಿನಿಟಿ ನಡುವೆ ಪ್ರಾಯೋಗಿಕವಾಗಿ ಪಿಆರ್‌ಟಿಎಸ್ ಪರಿಚಯಿಸಲು ನಿರ್ಧರಿಸಲಾಗಿದೆ. ಮೆಟ್ರೋ ವಿಸ್ತರಣೆ ಮಾದರಿಯಲ್ಲೇ ಇದು ಕೂಡ ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಗಗಳಲ್ಲಿ ವಿಸ್ತರಣೆ ಆಗಲಿದೆ. ಮೆಟ್ರೋ ನಿಲ್ದಾಣಗಳಿಗೆ ಈ ವಾಹನವನ್ನು ಜೋಡಣೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಯಾಣ ದರ ಕಡಿಮೆ?
ಆಟೋ, ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಹೋಲಿಸಿದರೆ, ಪಿಆರ್‌ಟಿಎಸ್ ಟ್ಯಾಕ್ಸಿಗಳ ದರ ಅರ್ಧಕ್ಕರ್ಧ ಕಡಿಮೆ ಎನ್ನಲಾಗಿದೆ. ಆಟೋ ಪ್ರತಿ ಕಿ.ಮೀ.ಗೆ 20 ರೂ. ಆಗುತ್ತದೆ. ಟ್ಯಾಕ್ಸಿಗಳಲ್ಲಿ ಕಿ.ಮೀಗೆ 18 ರೂ. ಆಗುತ್ತದೆ. ಆದರೆ, ಪಾಡ್ ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 9ರಿಂದ 10 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಏನಿದು ಪಿಆರ್‌ಟಿಎಸ್?
ಇದೊಂದು ಸಾರ್ವಜನಿಕ ಸಾರಿಗೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನಿಗದಿತ ದೂರವನ್ನು ನಿರ್ದಿಷ್ಟ ಸಮಯದಲ್ಲಿ ಇದು ಕ್ರಮಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಕಾರಿಡಾರ್ ಇರುವುದರಿಂದ ಸಂಚಾರದಟ್ಟಣೆ ಕಿರಿಕಿರಿ ಇಲ್ಲ. ಮೆಟ್ರೋ ರೈಲು ಮುಖ್ಯರಸ್ತೆಗಳಲ್ಲಿ ಮಾತ್ರ ಸಂಚರಿಸುತ್ತದೆ. ಕೊನೆಯ ಹಂತದ ಸಂಪರ್ಕಕ್ಕೆ ಬಸ್, ಆಟೋ, ಟ್ಯಾಕ್ಸಿ ಅವಲಂಬಿಸಿರುವ ಜನರ ಸಮಯ ಟ್ರಾಫಿಕ್ ಜಾಮ್‌ನಲ್ಲೇ ವ್ಯರ್ಥವಾಗುತ್ತದೆ. ಪಿಆರ್‌ಟಿಎಸ್‌ನಿಂದ ಈ ಸಮಸ್ಯೆ ಪರಿಹಾರವಾಗಲಿದೆ. ವಿದ್ಯುತ್ ಚಾಲಿತ ವಾಹನ ಇದಾಗಿದ್ದರಿಂದ ಹೊಗೆ, ಶಬ್ದಮಾಲಿನ್ಯದ ಸಮಸ್ಯೆ ಇರುವುದಿಲ್ಲ. ಈಗ ಎಲ್ಲಿದೆ?
ಪ್ರಸ್ತುತ ಲಂಡನ್ ಏರ್‌ಪೋರ್ಟ್ ಮಾರ್ಗದಲ್ಲಿ ಪಾಡ್ ಟ್ಯಾಕ್ಸಿ ಸೇವೆ ಇದೆ. ಈಗ ಬೆಂಗಳೂರಿನಲ್ಲಿ ಆರಂಭಗೊಂಡರೆ, ಪ್ರಪಂಚದಲ್ಲಿ ಈ ವ್ಯವಸ್ಥೆ ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ರಾಜಧಾನಿ ಪಾತ್ರವಾಗಲಿದೆ. ಹೀಗಿರುತ್ತೆ ಪಾಡ್ ಟ್ಯಾಕ್ಸಿ
ವಂಡರ್‌ಲಾನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾಷಿಂಗ್ ಕಾರುಗಳಂತೆಯೇ ಇರುವ ಈ ಪಾಡ್ ಟ್ಯಾಕ್ಸಿಗಳು ಮ್ಯಾಗ್ನೆಟಿಕ್ ವ್ಹೀಲ್ ಮೂಲಕ ಕಾರ್ಯಾಚರಣೆ ಮಾಡುತ್ತವೆ. ಇವುಗಳ ಉದ್ದ 4 ಮೀ. ಇರುತ್ತದೆ. ಮಾರ್ಗದಲ್ಲಿ ಪ್ರತಿ 10 ಮೀಟರ್ ಅಂತರದಲ್ಲಿ ಒಂದರಂತೆ ಕಾರ್ಯಾಚರಣೆ ಮಾಡುತ್ತದೆ. ಪಾಲಿಕೆ ಗುರುತಿಸಿರುವ ಮಾರ್ಗ
ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ- ಲೀಲಾ ಪ್ಯಾಲೇಸ್ ಜಂಕ್ಷನ್ (4 ಕಿ.ಮೀ.), ಲೀಲಾ ಪ್ಯಾಲೇಸ್- ಮಾರತ್‌ಹಳ್ಳಿ ಜಂಕ್ಷನ್ (6 ಕಿ.ಮೀ.), ಮಾರತ್‌ಹಳ್ಳಿ ಜಂಕ್ಷನ್- ಇಪಿಐಪಿ ವೈಟ್‌ಫೀಲ್ಡ್ (6.5 ಕಿ.ಮೀ.), ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ- ಕೋರಮಂಗಲ (4 ಕಿ.ಮೀ.), ಜಯನಗರ 4ನೇ ಬ್ಲಾಕ್- ಜೆ.ಪಿ. ನಗರ 6ನೇ ಹಂತ (5.3 ಕಿ.ಮೀ.), ಸೋನಿ ಜಂಕ್ಷನ್- ಇಂದಿರಾನಗರ ಮೆಟ್ರೋ ನಿಲ್ದಾಣ (6.7 ಕಿ.ಮೀ.) ನಡುವೆ ವಿವಿಧ ಹಂತಗಳಲ್ಲಿ ಪಿಆರ್‌ಟಿಎಸ್ ನಿರ್ಮಾಣಕ್ಕೆ ಬಿಬಿಎಂಪಿ ಉದ್ದೇಶಿಸಿದೆ. * ವಿಜಯಕುಮಾರ್ ಚಂದರಗಿ