ಬೆಂಗಳೂರು: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಲಾಡ್ಜ್ನಲ್ಲಿ ನೇಣಿಗೆ ಶರಣಾಗಿರುವ ಘಟನೆ ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಶಶಿಧರ್(24) ಆತ್ಮಹತ್ಯೆ ಮಾಡಿಕೊಂಡವ.
ಶಶಿಧರ್ ತನ್ನ ಊರಿನ ಅಪ್ರಾಪ್ತೆಯನ್ನು ಐದಾರು ವರ್ಷಗಳಿಂದ ಪ್ರೀತಿಸಿ 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ. ಆದರೆ, ಈ ವಿಚಾರ ತಿಳಿದ ಆಕೆಯ ಪೋಷಕರು ಶಶಿಧರ್ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದರು. ಅದರಿಂದ ಹೆದರಿದ್ದ ಶಶಿಧರ್, 3 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಕಾಟನ್‌ಪೇಟೆಯ ಲಾಡ್ಜ್ ನಲ್ಲಿ ವಾಸವಾಗಿದ್ದ. ಮತ್ತೂಂದೆಡೆ ಬಸವನಬಾಗೇವಾಡಿ ಪೊಲೀಸರು ಶಶಿಧರ್‌ನನ್ನು ಹುಡುಕಾಟ ಶುರು ಮಾಡಿದ್ದರು. ಹೀಗಾಗಿ ಸೋಮವಾರ ರಾತ್ರಿ ಲಾಡ್ಜ್ ನಲ್ಲಿಯೇ ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿ, “ಆರು ವರ್ಷಗಳಿಂದ ಪ್ರೀತಿಸಿ ನನ್ನ ಹುಡುಗಿಯನ್ನು ಮದುವೆಯಾಗಿದ್ದೆ. ಆದರೆ, ಆಕೆ ಪೋಷಕರು ಜಾತಿ ಸಲುವಾಗಿ ತನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನನ್ನ ಸಾವಿಗೆ ಪತ್ನಿಯ ಪೋಷಕರು. ಸಂಬಂಧಿಕರು ಕಾರಣ’ ಎಂದು ವಿಡಿಯೋ ಮಾಡಿದ್ದಾನೆ. ಅಲ್ಲದೆ, ಅದನ್ನು ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ. ಮಂಗಳವಾರ ಬೆಳಗ್ಗೆ ಲಾಡ್ಜ್ ನ ಸಿಬ್ಬಂದಿ ಬಾಗಿಲು ತೆರೆದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.