ಕಡಿಮೆ ದರದ ಮೊಬೈಲ್‍ಗಳಲ್ಲಿ ಹೆಚ್ಚಿನ ತಾಂತ್ರಿಕ ಸವಲತ್ತುಗಳನ್ನು ನೀಡುವ ಪೋಕೋ ಕಂಪೆನಿ ಇದೀಗ ತನ್ನ ಹೊಸ ಮೊಬೈಲ್ ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ ಪೋಕೋ ಎಂ3. 11 ಸಾವಿರ ಮತ್ತು 12 ಸಾವಿರ ದರದಲ್ಲಿ ಎರಡು ಆವೃತ್ತಿಗಳನ್ನು ಅದು ಹೊರ ತಂದಿದೆ.
ಈ ಹಿಂದಿನ ಪೋಕೋ ಎಂ2 ಮಾಡೆಲ್ ಬೆಸ್ಟ್ ಸೆಲ್ಲರ್ ಆಗಿದ್ದು, ಅದಕ್ಕಿಂತ ಸುಧಾರಿತ ಮಾದರಿಯಾಗಿ ಎಂ3 ಅನ್ನು ಹೊರತರಲಾಗಿದೆ.
ಪೋಕೋ ಎಂ3 6 ಜಿಬಿ ರ್ಯಾಮ್, ಹಿಂಬದಿಗೆ 48 ಮೆಗಾಪಿಕ್ಸಲ್ ತ್ರಿವಳಿ ಕ್ಯಾಮರಾ, ಸೆಲ್ಫೀಗೆ 8 ಮೆ.ಪಿ. ಕ್ಯಾಮರಾ, 6000 ಎಂಎಎಚ್ ಬ್ಯಾಟರಿ, ಫುಲ್ ಎಚ್‍ಡಿ ಪ್ಲಸ್ ಡಿಸ್‍ಪ್ಲೇ, ಕ್ವಾಲ್‍ಕಾಂ ಸ್ನಾಪ್‍ಡ್ರಾಗನ್ 662 ಪ್ರೊಸೆಸರ್ ಹೊಂದಿದೆ.
ಈ ಮೊಬೈಲ್ 6.53 ಫುಲ್ ಎಚ್ ಡಿ ಪ್ಲಸ್ ಡಿಸ್‍ಪ್ಲೇ ಹೊಂದಿದ್ದು, ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‍ನ ರಕ್ಷಣೆ ಹೊಂದಿದೆ. ಅಲ್ಲದೇ ಬಾಕ್ಸ್ ನೊಂದಿಗೆ ಬ್ಯಾಕ್ ಕವರ್ ಮತ್ತು ಪರದೆ ರಕ್ಷಕ ಫಿಲ್ಮ್ ಸಹ ಇದೆ. ಮೊಬೈಲ್ ನಲ್ಲಿ ಹೆಚ್ಚಿನ ದರದ ಮೊಬೈಲ್‍ಗಳಲ್ಲಿ ಮಾತ್ರವಿರುವ ಸ್ಟೀರಿಯೋ ಸೌಂಡ್ ಸೌಲಭ್ಯ ಸಹ ನೀಡಲಾಗಿದೆ.
6000 ಎಂಎಎಚ್ ಬ್ಯಾಟರಿ ಸರಿಸುಮಾರು ಎರಡು ದಿನಗಳ ಸಾಧಾರಣ ಬಳಕೆಗೆ ಸಾಕಾಗುತ್ತದೆ. ಇದಕ್ಕೆ 18 ವ್ಯಾಟ್ಸ್ ವೇಗದ ಚಾರ್ಜರ್ ಸಹ ನೀಡಲಾಗಿದೆ. ಕಪ್ಪು, ನೀಲಿ ಮತ್ತು ಹಳದಿ ಬಣ್ಣದಲ್ಲಿ ದೊರೆಯಲಿದೆ. ಫೆ. 9ರಿಂದ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಲಭ್ಯ.
6 ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹ: 11,000 ರೂ. 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ: 12,000 ರೂ. ಇದಲ್ಲದೇ ಐಸಿಐಸಿಐ ಕ್ರೆಡಿಟ್ ಮೂಲಕ ಕೊಂಡರೆ ಹೆಚ್ಚುವರಿಯಾಗಿ 1000 ರೂ. ರಿಯಾಯಿತಿ ಸಹ ಲಭ್ಯ.