ಚಾಮರಾಜನಗರ: ಮಾರಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಹಾಕಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಲಹೆ ನೀಡಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಆಯೋಜಿಸಿದ್ದ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಸೇರ್ಪಡೆಯ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿನ ಆರೋಗ್ಯಕರ ಬೆಳವಣಿಗೆಗೆ ರೋಗ ನಿರೋಧಕ ಶಕ್ತಿ ಅಗತ್ಯ. ಹುಟ್ಟಿದ ದಿನದಿಂದ 5 ವರ್ಷಗಳ ತನಕ ಮಕ್ಕಳಿಗೆ ಹಲವು ಲಸಿಕೆಗಳನ್ನು ಹಾಕಲಾಗುತ್ತದೆ. ಈ ಲಸಿಕೆಗಳ ಜೊತೆ ಹೆಚ್ಚುವರಿಯಾಗಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ನೀಡಲಾಗುತ್ತದೆ. ಮಕ್ಕಳ ಶ್ವಾಸಕೋಶ ಹಾಗೂ ಮೆದುಳು ಸುರಕ್ಷಿತವಾಗಿರಲು ಈ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕಾ ಕಾರ್ಯಕ್ರಮ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ಲಭ್ಯವಿದೆ. ಜಿಲ್ಲೆಯಲ್ಲಿ ಈ ಲಸಿಕೆ ನೀಡಲು 1,052 ಫಲಾನುಭವಿ ಮಕ್ಕಳನ್ನು ಗುರುತಿಸಲಾಗಿದೆ ಎಂದರು.
ಉಚಿತ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಈ ಲಸಿಕೆಯನ್ನು ನೀಡಲಾಗುತ್ತಿದ್ದು ಈ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ 3 ರಿಂದ 3,500 ರೂ. ಪಡೆಯಲಾಗುತ್ತದೆ. ಆದರೆ, ಸರ್ಕಾರವು ಆರೋಗ್ಯ ಇಲಾಖೆ ಮೂಲಕ ಉಚಿತವಾಗಿ ಈ ಲಸಿಕೆಯನ್ನು ನೀಡುವ ಕಾರ್ಯ ಮಾಡುತ್ತಿದೆ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ಮಾರಕ ಕಾಯಿಲೆಗಳಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಾ.ಸುಧೀರ್ ನಾಯಕ್ ಮಾತನಾಡಿ, ಮಗು ಹುಟ್ಟಿದಾಗಿನಿಂದ 5 ವರ್ಷದ ತನಕ 7 ಬಾರಿ ನ್ಯೂಮೋಕಾಕಲ್‌ಕಾಂಜುಗೇಟ್‌ಲಸಿಕೆಹಾಕಿಸಬೇಕು. ಮೊದಲು ಒಂದೂವರೆ ತಿಂಗಳಿಗೆ ಮೊದಲನೇ ಡೋಸ್ ಕೊಡಲಾಗುತ್ತದೆ. ಬಳಿಕ ಮೂರೂವರೆ ಹಾಗೂ ಒಂಭತ್ತು ತಿಂಗಳಿಗೆ ಹಾಕಿಸಬೇಕು. ಈ ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ಮೆದುಳು ಜ್ವರ ಹಾಗೂ ಕಿವಿ ಸೋರುವುದನ್ನು ತಡೆಗಟ್ಟಬಹುದು. ಮಕ್ಕಳಿಗೆ ಬರುವ 12 ಮಾರಕ ಕಾಯಿಲೆಗಳ ವಿರುದ್ಧ ಹೋರಾಡಲು ಈ ಲಸಿಕೆ ಪ್ರಮುಖವಾಗಿದೆ ಎಂದರು.
ಕರಪತ್ರ: ಇದೇ ಸಂದರ್ಭದಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಸಂಬಂಧ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತಉ ಕುಟುಂಬ ಕ ಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಡಾ.ಅಂಕಪ್ಪ, ಡಾ. ಸುಗುಣಾ, ಡಾ.ವಿದ್ಯಾಸಾಗರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸಿ : ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳಿಗೆ ನೀಡಲಾಗುವ ವಿವಿಧ ರೀತಿಯ ಲಸಿಕೆಗಳನ್ನು ನೀಡುವುದನ್ನು ನಿಲ್ಲಿಸಲಾಗಿತ್ತು.ಕೋವಿಡ್ ಅಲೆಕಡಿಮೆಯಾಗಿ ರುವುದರಿಂದ ನಿಲ್ಲಿಸಿದ್ದ ಎಲ್ಲ ಲಸಿಕೆಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಮಕ್ಕಳು ಹುಟ್ಟಿದ ತಕ್ಷಣ ಆರೋಗ್ಯವಾಗಿರಬೇಕೆಂದು ಎಲ್ಲ ತಾಯಂದಿರು ಬಯಸುತ್ತಾರೆ. ಎಲ್ಲ ತಾಯಂದಿರುವ ತಮ್ಮ ಮಕ್ಕಳ ರಕ್ಷಣೆಗೆ ಈ ಲಸಿಕೆಯನ್ನು ಹಾಕಿಸಬೇಕು. ಇದರಿಂದ ಮಕ್ಕಳಿಗೆ ಬರುವ ಜ್ವರ, ಕಿವಿ ಸೋರುವಿಕೆ, ಮೆದುಳು ಜ್ವರ ಸೇರಿದಂತೆ ಇತರೆಕಾಯಿಲೆಗಳನ್ನು ತಡೆಗಟ್ಟಬಹುದು. ಈ ಲಸಿಕೆ ಸಂಬಂಧ ತಮ್ಮ ಸುತ್ತಮುತ್ತಲಿನ ಜನರಿಗೂ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.