ಹೊಸದಿಲ್ಲಿ : ದಿಲ್ಲಿಯ ವಜ್ರಾಭರಣ ಕಂಪೆನಿಯೊಂದರಿಂದ ತನಗೆ 389.85 ಕೋಟಿ ರೂ.ಗಳ ಸಾಲ ವಂಚನೆಯಾಗಿದೆ ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ದೂರು ನೀಡಿದ ಆರು ತಿಂಗಳ ಅನಂತರ ಸಿಬಿಐ ಕೊನೆಗೂ, ಇಂದು ಶನಿವಾರ ಕೇಸು ದಾಖಲಿಸಿಕೊಂಡಿದೆ.
ದಿಲ್ಲಿಯ ಕರೋಲ್ ಬಾಗ್‌ನಲ್ಲಿರು ದ್ವಾರಕಾದಾಸ್ ಸೇಠ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿರುದ್ಧ ಸಿಬಿಐ, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ಗೆ 389.85 ಕೋಟಿ ರೂ. ಸಾಲ ವಂಚನೆ ಮಾಡಿರುವ ಬಗ್ಗೆ ಇಂದು ಶನಿವಾರ ಕೇಸು ದಾಖಲಿಸಿಕೊಂಡಿತು.
ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಮೆಹೂಲ್ ಚೋಕ್ಸಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 11,300 ಕೋಟಿ ರೂ. ಸಾಲ ವಂಚನೆ ಮಾಡಿರುವುದರ ವಿರುದ್ಧ ಕುಣಿಕೆ ಬಿಗಿಯುತ್ತಿರುವ ಸಿಬಿಐ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ತನಗೆ ದಿಲ್ಲಿ ವಜ್ರಾಭರಣ ಉದ್ಯಮ ಸಂಸ್ಥೆಯಿಂದ 389.85 ಕೋಟಿ ರೂ.ಸಾಲ ವಂಚನೆಯಾಗಿರುವುದಾಗಿ ದೂರು ನೀಡಿದ ಆರು ತಿಂಗಳ ಬಳಿಕ, ಹಾಲಿ ಸನ್ನಿವೇಶದಲ್ಲಿ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿರುವುದು ತನಿಖಾ ವ್ಯವಸ್ಥೆಯಲ್ಲಿನ ಸಡಿಲುತನ ಇದೀಗ ಬಹಿರಂಗವಾಗಿದೆ.
ಸಿಬಿಐ ಇಂದು ಒರಿಯೆಂಟಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಸಭ್ಯ ಸೇಠ್ , ರೀಟಾ ಸೇಠ್ , ಕೃಷ್ಣ ಕುಮಾರ್ ಸಿಂಗ್ , ರವಿ ಸಿಂಗ್ ಮತ್ತು ದ್ವಾರಕಾ ದಾಸ್ ಸೇಠ್, ಎಸ್‌ಇಝಡ್ ಇನ್‌ಕಾರ್ಪೊರೇಶನ್ ಸಂಸ್ಥೆಯ ವಿರುದ್ಧ ಕೇಸು ದಾಖಲಿಸಿಕೊಂಡಿತು.
ದ್ವಾರಕಾದಾಸ್ ಸೇಠ್ ಕಂಪೆನಿಯು 2007 ಮತ್ತು 2012ರ ನಡುವೆ ಓಬಿಸಿ ಯಿಂದ ವಿವಿಧ ಬಗೆಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದು ಈ ಸುಸ್ತಿ ಸಾಲವು 389 ಕೋಟಿ ರೂ. ಮೊತ್ತಕ್ಕೆ ಬೆಳೆದಿದೆ.