Advertisement

ಪಿಎನ್‌ಬಿ: ಶೆಲ್‌ ಕಂಪನಿಗಳಿಂದ 5000 ಕೋಟಿ ರೂ. ವರ್ಗಾವಣೆ

07:00 AM Apr 10, 2018 | Team Udayavani |

ನವದೆಹಲಿ/ಬೀಜಿಂಗ್‌: ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ.ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) 5 ಸಾವಿರ ಕೋಟಿ ರೂ.ಮೊತ್ತವನ್ನು ನಕಲಿ ಕಂಪನಿಗಳ ಮೂಲಕ ನಡೆಸಿರಬಹುದು ಎಂದು ಕಂಡುಕೊಂಡಿದೆ. ಈ ಬಗ್ಗೆ ಇಬ್ಬರು ಅಧಿಕಾರಿಗಳನ್ನು ಉಲ್ಲೇಖೀಸಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಸ್ವರ್ಣೋದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಸ್ಕಿ 40 ನಕಲಿ ಕಂಪನಿಗಳನ್ನು ಆರಂಭಿಸಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧ ಒಂದು ತಿಂಗಳ ಒಳಗಾಗಿ ಕೇಸು ದಾಖಲಿಸಲು ಇ.ಡಿ.ಮುಂದಾಗಿದೆ. ನಕಲಿ ಕಂಪನಿಗಳ ಹೆಸರಲ್ಲಿ ದೊಡ್ಡ ಮೊತ್ತದ ಸಾಲವನ್ನೂ ಅವರು ಪಡೆದಿದ್ದಾರೆ. ಸಾಗರೋತ್ತರ ಕಂಪನಿಗಳಿಗೆ ನೇರವಾಗಿ ಮೊತ್ತ ವರ್ಗಾವಣೆ ಮಾಡುವ ಬದಲು, ಕಂಪನಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. 

ಸ್ವತಂತ್ರ ನಿರ್ಧಾರ: ಇದೇ ವೇಳೆ, ಪಿಎನ್‌ಬಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಉದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಹಾಂಕಾಂಗ್‌ ತನ್ನದೇ ಆದ ನಿರ್ಧಾರ ಕೈಗೊಳ್ಳಬಹುದು. ಹೀಗೆಂದು ಚೀನಾ ಸರ್ಕಾರ ಸೋಮವಾರ ಹೇಳಿದೆ. ನೀರವ್‌ ಮೋದಿ ವಿರುದ್ಧ ಹಾಂಕಾಂಗ್‌ನ ಸ್ಥಳೀಯ ಕಾನೂನು, ನಿಯಮಗಳ ಅನ್ವಯ ಕ್ರಮ ಕೈಗೊಳ್ಳಬಹುದು ಎಂದಿದೆ. 

ಶೀಘ್ರ ತೀರ್ಮಾನ: ಈ ನಡುವೆ ಕೋರ್ಟ್‌ ಉಸ್ತುವಾರಿಯಲ್ಲಿ ಪಿಎನ್‌ಬಿ ಹಗರಣದ ತನಿಖೆ ನಡೆಯಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಪರಿಗಣಿಸಬೇಕೋ ಬೇಡವೋ ಎಂಬ ಬಗ್ಗೆ ಶೀಘ್ರವೇ ತೀರ್ಮಾನಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಸದ್ಯ ವಿವಿಧ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ತನಿಖೆ ನಡೆಸುತ್ತಿವೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next