ನವದೆಹಲಿ:ಮಣಿಪುರ ಘರ್ಷಣೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಆ.10) 4ಗಂಟೆಗೆ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಸಂಸತ್ ಕಲಾಪಕ್ಕೆ ಪ್ರಧಾನಿ ಮೋದಿ ಅವರು ಆಗಮಿಸಿದ್ದಾರೆ.
ಇದನ್ನೂ ಓದಿ:Kidnappe:ಮ್ಯೂಸಿಕ್ ಕಂಪನಿ ಸಿಇಒ ಅಪಹರಣ; ಶಿಂಧೆ ಬಣದ ಶಾಸಕನ ಪುತ್ರನ ವಿರುದ್ಧ FIR
ಕಳೆದ ಎರಡು ದಿನಗಳ ಕಾಲ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರು ದೀರ್ಘಕಾಲ ಚರ್ಚೆ, ವಾಗ್ವಾದ ನಡೆದಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಲಿರುವ ಉತ್ತರದತ್ತ ಎಲ್ಲರ ಚಿತ್ತ ನೆಟ್ಟಿದೆ.
ಮಣಿಪುರ ಹಿಂಸಾಚಾರ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಖುದ್ದು ಸಂಸತ್ ಗೆ ಹಾಜರಾಗಿ ಉತ್ತರ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದ ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟಲ್ ಇನ್ ಕ್ಲೂಸಿವ್ ಅಲೈಯನ್ಸ್ (INDIA) ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು.
ಬುಧವಾರ ನಡೆದ ಕಲಾಪದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಗುರುವಾರಕ್ಕೆ ಮುಂದೂಡುವ ಮೊದಲು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮಾತನಾಡಿ, ಗುರುವಾರದ ಕಲಾಪದಲ್ಲಿ ಪ್ರಧಾನಿ ಮೋದಿ ಅವರು ಹಾಜರಾಗುವುದನ್ನು ಖಚಿತಪಡಿಸಿದ್ದರು.