Advertisement

ಮೋದೀದ್ದು ಗಾಂಧಿಗಿಂತಲೂ ದೊಡ್ಡ ಬ್ರ್ಯಾಂಡ್‌ ನೇಮ್‌: ಹರಿಯಾಣ ಸಚಿವ

04:01 PM Jan 14, 2017 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಗಿಂತಲೂ ದೊಡ್ಡ  ಬ್ರ್ಯಾಂಡ್‌ ನೇಮ್‌ ಎಂದು ಹೇಳುವ ಮೂಲಕ ಹರಿಯಾಣ ಸಚಿವ ಅನಿಲ್‌ ವಿಜ್‌ ಅವರು ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ.

Advertisement

ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗ (ಕೆವಿಐಸಿ)ದ ಡೈರಿ ಮತ್ತು ಕ್ಯಾಲೆಂಡರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಪೋಸ್‌ನಲ್ಲಿ ದೊಡ್ಡ ಚರಕರದ ಮುಂದೆ ಕುಳಿತು ನೂಲುತ್ತಿರುವ ಚಿತ್ರವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ರಾಜಕೀಯ ವಿವಾದಕ್ಕೆ ಸಚಿವ ಅನಿಲ್‌ ವಿಜ್‌ ಅವರು ಹೊಸ ತಿರುವು ಕೊಟ್ಟು ಉರಿಯುತ್ತಿರುವ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಹರಿಯಾಣದಲ್ಲಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಅನಿಲ್‌ ವಿಜ್‌ ಅವರು ತಮ್ಮ ಹೇಳಿಕೆಯಲ್ಲಿ “ಮಹಾತ್ಮ ಗಾಂಧಿ ಅವರ ಹೆಸರನ್ನು ಜೋಡಿಸಿಕೊಂಡಂದಿನಿಂದ ಖಾದಿ ಉತ್ಪನ್ನಗಳು ದೇಶದಲ್ಲಿ ಏಳಿಗೆಯನ್ನೇ ಕಂಡಿಲ್ಲ’ ಎಂದು ಹೇಳಿದ್ದಾರೆ. 

“ಮಹಾತ್ಮ ಗಾಂಧಿ ಹೆಸರಿನಲ್ಲಿ ಖಾದಿ ಪೇಟೆಂಟ್‌ ಆಗಿಲ್ಲ; ಖಾದಿಯೊಂದಿಗೆ ಮೋದಿ ಗುರುತಿಸಿಕೊಂಡ ಬಳಿಕ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟ ಶೇ.14ರಷ್ಟು  ಹೆಚ್ಚಾಗಿದೆ. 2017ರ ಕೆವಿಐಸಿ ಕ್ಯಾಲೆಂಡರ್‌ ಮತ್ತು ಡೈರಿಯಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಂಡು ಬಂದಿರುವುದು ಸರಿಯಾಗಿಯೇ ಇದೆ; ಏಕೆಂದರೆ ಮೋದಿ ಬ್ರ್ಯಾಂಡ್‌ ನೇಮ್‌ ಗಾಂಧಿಗಿಂತಲೂ ದೊಡ್ಡದಿದೆ’ ಎಂದು ವಿಜ್‌ ಹೇಳಿದರು.

ಭಾರತೀಯ ನೋಟುಗಳ ಮೇಲೆ ಗಾಂಧಿ ಚಿತ್ರ ಮೂಡಿದಂದಿನಿಂದಲೇ ನೋಟುಗಳ ಅಪಮೌಲ್ಯ ಆರಂಭವಾಗಿದೆ ಎಂದು ಸಚಿವ  ವಿಜ್‌ ಹೇಳಿದರು. “ಹಾಗಿದ್ದರೆ ಹೊಸ ನೋಟುಗಳ ಮೇಲೆ ಮೋದಿ ಸರಕಾರ ಗಾಂಧಿ ಚಿತ್ರವನ್ನು ಏಕೆ ಮುಂದುವರಿಸಿದೆ?’ ಎಂಬ ಪ್ರಶ್ನೆಗೆ ಸಚಿವ ವಿಜ್‌, ಸದ್ಯದಲ್ಲೇ ನಮ್ಮ ನೋಟುಗಳ ಮೇಲಿನ ಗಾಂಧಿ ಚಿತ್ರ ಕಣ್ಮರೆಯಾಗಲಿವೆ ಎಂದು ಹೇಳಿದರು. 

Advertisement

ಸಚಿವ ವಿಜ್‌ ಅವರ ಈ ಎಲ್ಲ ಹೇಳಿಕೆಗಳನ್ನು ಬಿಜೆಪಿಯು “ವಿಜ್‌ ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆಯೇ ಹೊರತು ಪಕ್ಷದ್ದಲ್ಲ’ ಎಂದು ನೇರವಾಗಿ ಹೇಳುವ ಮೂಲಕ ವಿವಾದದಿಂದ ಕೈತೊಳೆದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next