Advertisement

31ರಂದು ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ

05:21 PM May 24, 2022 | Team Udayavani |

ಚಿತ್ರದುರ್ಗ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 31ರಂದು ಹಿಮಾಚಲ ಪ್ರದೇಶದ ಶಿಮ್ಲಾದಿಂದ ಸಂವಾದ ನಡೆಸಲಿದ್ದಾರೆ. ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಕಿಸಾನ್‌ ಸಮ್ಮಾನ್‌, ಉಜ್ವಲ, ಪೋಷಣಾ ಅಭಿಯಾನ, ಮಾತೃವಂದನ, ಸ್ವನಿಧಿ ಯೋಜನೆ, ಗರೀಬ್‌ ಕಲ್ಯಾಣ ಅನ್ನ ಯೋಜನೆ, ಸ್ವಚ್ಛ ಭಾರತ ಮಿಷನ್‌, ಜಲ ಜೀವನ್‌ ಮಿಷನ್‌, ಒಂದು ದೇಶ ಒಂದು ಪಡಿತರ ಚೀಟಿ, ಆಯುಷ್ಮಾನ್‌ ಭಾರತ್‌ ಪಿಎಂ ಆರೋಗ್ಯ ಯೋಜನೆ, ಆಯುಷ್ಮಾನ್‌ ಭಾರತ್‌ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಮುದ್ರಾ ಯೋಜನೆಗಳ ಲಾಭ ಪಡೆದ ಸುಮಾರು 250ಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು, ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರೊಂದಿಗೆ ಸಂವಾದ ನಡೆಸಲು ಸೂಕ್ತ ವಿಡಿಯೋ ಸಂವಾದ ಕೇಂದ್ರವನ್ನು ನಿರ್ಮಿಸಬೇಕು. ವಿಡಿಯೋ ಸಂವಾದಗಳ ಪ್ರದರ್ಶನಕ್ಕೆ ಎಲ್‌ಇಡಿ ಸ್ಕ್ರೀನ್‌ ಅಳವಡಿಸಬೇಕು. ಗಣ್ಯರಿಗೆ ಆಹ್ವಾನ ನೀಡಬೇಕು. ಫಲಾನುಭವಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯೊಂದಿಗೆ ಊಟ ಉಪಹಾರಗಳನ್ನು ಕಲ್ಪಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್‌ ಹಾಗೂ ವೈದ್ಯರ ತಂಡ ನಿಯೋಜನೆ ಮಾಡಬೇಕು. ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಸದಸ್ಯರುಗಳು ಸಂವಾದದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಪ್ರತಿ ಪಂಚಾಯತಿಯಿಂದ ಕನಿಷ್ಠ ಇಬ್ಬರು ಸದಸ್ಯರು ಪಾಲ್ಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಡಿಎಚ್‌ಒ ಡಾ| ರಂಗನಾಥ, ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್‌ಕುಮಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next